ಹೊಸದಿಲ್ಲಿ: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆಸಲು ಕೇಂದ್ರ ಸರಕಾರ ಹಿಂಜರಿಯುತ್ತಿದ್ದು, ಈ ವಿವಾದದಿಂದ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಕೇಂದ್ರ ಸರಕಾರ ಪ್ರಜಾಸತ್ತಾತ್ಮಕ ತತ್ವಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಿರುವುದರಿಂದ ಸಂವಿಧಾನವನ್ನು ಉಳಿಸಲು ಪ್ರತಿಪಕ್ಷಗಳು ಕಠಿಣ ಹೋರಾಟ ನಡೆಸುತ್ತಿವೆ ಎಂದು ಅವರು ಹೇಳಿದರು.
ಎರಡೂವರೆ ವರ್ಷಗಳಲ್ಲಿ ಗೌತಮ್ ಅದಾನಿ ಸಂಪತ್ತು ಹೆಚ್ಚಾಗಿದೆ. ಕೇವಲ ಓರ್ವ ವ್ಯಾಪಾರಿಗೆ ಸರ್ಕಾರ ಎಲ್ಲಾ ಟೆಂಡರ್ ನೀಡಿದೆ. ಕೇವಲ ಭಾಷಣದಿಂದ ಯಾವುದೇ ಕೆಲಸ ನಡೆಯುವುದಿಲ್ಲ. ಜನರ ಹಣ ಕೇವಲ ಓರ್ವ ಉದ್ಯಮಿಗೆ ಯಾಕೆ ನೀಡುತ್ತಿದ್ದಾರೆ?. ದೇಶದ ಸಂವಿಧಾನ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಮೋದಿ ಸರ್ಕಾರ ಹೇಳಿದ ಯಾವುದನ್ನೂ ಮಾಡಿ ತೋರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರತಿಪಕ್ಷಗಳು ತಮ್ಮ ವಿಚಾರಗಳನ್ನು ಮಂಡಿಸಲು ಕೇಂದ್ರ ಸರಕಾರ ಅವಕಾಶ ನೀಡುತ್ತಿಲ್ಲ 52 ವರ್ಷಗಳ ತನ್ನ ಸಾರ್ವಜನಿಕ ಜೀವನದಲ್ಲಿ ಇಂತಹ ಬೆಳವಣಿಗೆಗಳು ಮೊದಲ ಬಾರಿಗೆ ನಡೆಯುತ್ತಿವೆ. ಇದೇ ಪ್ರವೃತ್ತಿ ಮುಂದುವರಿದರೆ ಪ್ರಜಾಪ್ರಭುತ್ವ ಸರ್ವಾಧಿಕಾರವಾಗಿ ಬದಲಾಗುತ್ತದೆ ಎಂದವರು ಹೇಳಿದರು.
ಹೊಸ ಎಂಜಿನ್ ಹಾಕಿ ಆರಂಭಿಸಲಾಗುವ ಹೊಸ ರೈಲುಗಳನ್ನು ಉದ್ಘಾಟಿಸಲು ಪ್ರಧಾನಿಯೊಬ್ಬರ ಅಗತ್ಯ ಏನಿದೆ. ಹಳೆಯ ಎಂಜಿನ್ ಗಳನ್ನು ಹಾಕಿ ಉದ್ದುದ್ದ ಭಾಷಣ ಮಾಡಿ ರೈಲು ಉದ್ಘಾಟಿಸುವುದನ್ನು ಬಿಟ್ಟು ಅವರು ಬೇರೇನೂ ಮಾಡಿಲ್ಲ. ರೈಲಿನ ಉದ್ಘಾಟನೆಗೆ ಪ್ರಧಾನಿ ಯಾಕೆ ಬೇಕು, ಸ್ಥಳೀಯ ಸಂಸದ ಸಾಕಾಗುವುದಿಲ್ಲವೇ ಎಂದವರು ಪ್ರಶ್ನಿಸಿದರು.