ಹಾಸನ: ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೆ ವೇಳೆ ಪ್ರತೀ ಬಾರಿಯಂತೆ ಗೌರವ ವಂದನೆ ಸ್ವೀಕಾರ ಸಂಪ್ರದಾಯವನ್ನು ಪಾಲನೆ ಮಾಡಲಾಗಿದೆ. ಹಿಂದಿನಿಂದ ಜಾತ್ರೆ ವೇಳೆ ಕುರಾನ್ ಪಠಣ ಮಾಡುತ್ತಿದ್ದ ಮುಸ್ಲಿಂ ಖಾಜಿಗಳು ಈ ಬಾರಿ ಹಿಂದೂ ಸಂಘಟನೆಗಳ ವಿರೋಧದಿಂದಾಗಿ ಕೇವಲ ಶ್ಲೋಕ ಪಠಣ ಮಾಡಿ ಜಾತ್ರೆಗೆ ಚಾಲನೆ ನೀಡಿದ್ರು
ಬೆಳಗ್ಗೆ ಸುಮಾರು 10:50ಕ್ಕೆ ವಾಡಿಕೆಯಂತೆ ಖಾಜ ಸಾಹೇಬರು ದೇವಸ್ಥಾನದ ಮೂಲೆಯ ಮೆಟ್ಟಿಲ ಮೇಲೆ ಶ್ಲೋಕ ಪಠಿಸಿದ ನಂತರ ತೇರು ಎಳೆಯಲಾಯಿತು. ಈ ವೇಳೆ ಸ್ಥಳೀಯ ಶಾಸಕ ಕೆಎಸ್ ಲಿಂಗೇಶ್, ಮಾಜಿ ಸಚಿವ ಹೆಚ್‌ಡಿ ರೇವಣ್ಣ, ದೇವಸ್ಥಾನದ ಆಡಳಿತಾಧಿಕಾರಿ ವಿದ್ಯುಲ್ಲತಾ, ಸೇರಿದಂತೆ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಖುರಾನ್ ಪಠಣಕ್ಕೆ ಅನುಮತಿ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಕುರಾನ್ ಪಠಣ ಮಾಡುವ ಸುತ್ತಲೂ ಬ್ಯಾರಿಕೇಡ್ ಹಾಕಿ ಅರೆ ಮಿಲಿಟರಿ ಕಾರ್ಯಪಡೆ ಹಾಗೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಹಿಂದು ಸಂಘಟನೆಗಳು ಖುರಾನ್ ಪಠಣಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ದೇವಾಲಯದ ಹೊರಭಾಗದ ಮೂಲೆಯಲ್ಲಿ ಮೆಟ್ಟಿಲ ಮೇಲೆ ಬೇಲೂರು ತಾಲೂಕಿನ ದೊಡ್ಡ ಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಶ್ಲೋಕ ಓದಿದರು.
ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಶ್ಲೋಕ ಓದಿದ ಬಳಿಕ ಸಾವಿರಾರು ಭಕ್ತರು ತೇರು ಎಳೆದರು. ಈ ವೇಳೆ ಭಕ್ತರು ತೇರಿಗೆ ಬಾಳೆಹಣ್ಣು ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.