ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಧಾನಸಭಾ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ದೇವನಹಳ್ಳಿಯಿಂದ ಕೆ.ಎಚ್. ಮುನಿಯಪ್ಪ ಸ್ಪರ್ಧಿಸುತ್ತಿದ್ದು ಇದು ಹಲವು ರಾಜಕೀಯ ಭಿನ್ನಮತಗಳಿಗೆ ಕಾರಣವಾಗಲಿದೆ.
ಬಹುತೇಕ ಮೂರು ದಿನಗಳ ಹಿಂದೆಯೇ ದೇವನಹಳ್ಳಿಯಿಂದ ಕೆ.ಎಚ್.ಮುನಿಯಪ್ಪ ನಿಲ್ಲಲಿದ್ದಾರೆ ಎಂಬ ಸುಳಿವು ದೊರೆಕಿತ್ತು. ತಕ್ಷಣವೇ ದೇವನಹಳ್ಳಿ ಕ್ಷೇತ್ರ ಕಾಂಗ್ರೆಸ್‍ನಲ್ಲಿ ಅಲ್ಲೋಲಕಲ್ಲೋಲ ಉಂಟಾಗಿತ್ತು. ಗುರುವಾರ ಮುನಿಯಪ್ಪ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸುವುದನ್ನು ವಿರೋಧಿಸಿ ದೇವನಹಳ್ಳಿಯ ಹಲವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು. ತನ್ಮೂಲಕ ಕೆ.ಎಚ್.ಮುನಿಯಪ್ಪ ಮತ್ತು ಜಿ.ಪರಮೇಶ್ವರ್ ಅವರ ಭಿನ್ನಾಭಿಪ್ರಾಯಗಳು ಮುನ್ನಲೆಗೆ ಬಂದಿತ್ತು.
ಪರಮೇಶ್ವರ್ ಬೆಂಬಲಿಗರು ಎ.ಸಿ. ಶ್ರೀನಿವಾಸ್ ಅವರನ್ನು ದೇವನಹಳ್ಳಿ ಅಭ್ಯರ್ಥಿಯಾಗಿ ಬಯಸಿದ್ದರು. ಆದರೆ ದೇವನಹಳ್ಳಿಗೆ ಹೊರಗಿನವರಾದ ಮುನಿಯಪ್ಪನವರಿಗೆ ಟಿಕೆಟ್ ನೀಡಿರುವುದು ಸ್ಥಳೀಯರಲ್ಲಿ ಅಸಮಾಧಾನವುಂಟುಮಾಡಿದೆ.
ಈ ಮುನ್ನ ಕೋಲಾರದಿಂದ ಸ್ಪರ್ಧಿಸಬೇಕಿದ್ದ ಮುನಿಯಪ್ಪ, ಕ್ಷೇತ್ರಕ್ಕೆ ಸಿದ್ದರಾಮಯ್ಯ ಆಗಮನದಿಂದ ವಿಚಲಿತರಾದಂತೆ ಕಂಡುಬಂದಿತ್ತು. ಆದರೆ ಸಿದ್ದರಾಮಯ್ಯ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.