ಬೆಂಗಳೂರು : ರಾಮನಗರ (Ramanagar) ತಾಲೂಕು ಬಿಡದಿ ಹೋಬಳಿಯ ಕೇತಗಾನಹಳ್ಳಿ (Kethaganahalli) ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳ ಒತ್ತುವರಿ ಆರೋಪಕ್ಕೆ ಪ್ರಕರಣದಲ್ಲಿ ಎಸ್‌ಐಟಿ ರಚಿಸಿರುವ ಸರ್ಕಾರದ ಆದೇಶ ವಜಾಗೊಳಿಸುವಂತೆ ಕೋರಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ (H D Kumaraswamy) ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠದಿಂದ ವಿಚಾರಣೆ ನಡೆಯಿತು.
ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿಅರ್ಜಿಯನ್ನು ಎರಡು ವಾರ ವಿಚಾರಣೆ ಮುಂದೂಡುವಂತೆ ಕೋರಿದ್ರು. ಎಸ್‌ಟಿ ಸಿಂಧುತ್ವ ಪ್ರಶ್ನಿಸಿರುವುದರಿಂದ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೇಳಿದರು. ಆಗ ಪೀಠವು ಸರ್ಕಾರಕ್ಕೆ ಕಾಲಾವಕಾಶ ನೀಡಲಾಗುವುದು ಎಂದಿದೆ.
ಬಳಿಕ ಕುಮಾರಸ್ವಾಮಿ ಪರ ವಕೀಲ ಎ ವಿ ನಿಶಾಂತ್ ವಾದ ಮಂಡಿಸಿದ್ರು ‘ಕೇತಗಾನಹಳ್ಳಿಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ಇಂದಿಗೂ ನ್ಯಾಯಾಂಗ ನಿಂದನೆ ಪ್ರಕರಣ ಬಾಕಿ ಇದೆ. ವಿಭಾಗೀಯ ಪೀಠದಿಂದ ಮುಂದಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕುಮಾರಸ್ವಾಮಿ ಅವರನ್ನು ಆರೋಪಿಯನ್ನಾಗಿ ಮಾಡಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ ಜುಲೈ 17ಕ್ಕೆ ತಡೆ ನೀಡಿದೆ. ಇದಕ್ಕೂ ಮುನ್ನವೇ, ಕುಮಾರಸ್ವಾಮಿ ಅವರು ಭೂಮಿ ಒತ್ತುವರಿ ಮಾಡಿದ್ದಾರೆ ಎಂಬುದರ ತನಿಖೆಗೆ ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ. ಇದು ಶಾಸನಕ್ಕೆ ವಿರುದ್ಧವಾಗಿದೆ ಎಂದರು.
ಇದನ್ನೂ ಓದಿ: ಹೆಚ್ಡಿಕೆಗೆ ಬಿಗ್ ರಿಲೀಫ್, ಜಮೀನು ಒತ್ತುವರಿ ಕೇಸ್ ವಿಚಾರಣೆಗೆ ಕೋರ್ಟ್ ತಡೆ
ಎಸ್‌ಐಟಿ ರಚಿಸಿರುವುದರಲ್ಲಿ ತಪ್ಪೇನಿದೆ? ವಾಸ್ತವಿಕ ಅಂಶಗಳನ್ನು ಎಸ್‌ಐಟಿ ಪತ್ತೆ ಮಾಡಿ, ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಪೀಠ ಪ್ರಶ್ನೆ ಮಾಡಿತು
‘ಶಾಸನದ ಪ್ರಕಾರ ಎಸ್‌ಐಟಿ ರಚಿಸಿದರೆ ನಮ್ಮ ಯಾವುದೇ ಆಕ್ಷೇಪವಿಲ್ಲ. ಕರ್ನಾಟಕ ಭೂ ಕಂದಾಯ ಕಾಯಿದೆ ಅಡಿ ಎಸ್‌ಐಟಿ ರಚಿಸುವುದಕ್ಕೆ ಅವಕಾಶವಿಲ್ಲ. ರಿಟ್ ಅರ್ಜಿ, ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಕುಮಾರಸ್ವಾಮಿ ಪಕ್ಷಕಾರರಾಗಿಲ್ಲ. ಆದರೂ, ಸರ್ಕಾರ ಎಸ್‌ಐಟಿ ರಚಿಸಿದೆ. ಎರಡು ಸಂದರ್ಭಗಳಲ್ಲಿ ಅಧಿಸೂಚನೆ ಎಂದು ಬಳಕೆ ಮಾಡಲಾಗಿದೆ. ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸುವುದನ್ನು ಅಧಿಸೂಚನೆ ಎಂದು ಹೇಳಲಾಗುತ್ತದೆ. ನಮ್ಮ ಪ್ರಕಾರ ಇದು ಅಧಿಸೂಚನೆಯಲ್ಲ. ಇದೊಂದು ಕಾರ್ಯಕಾರಿ ಆದೇಶವಷ್ಟೇ. ಸಂವಿಧಾನದ 162ನೇ ವಿಧಿಯಡಿ ಏನೂ ಬೇಕಾದರೂ ಮಾಡಲು ಸರ್ಕಾರ ತನ್ನ ಹಕ್ಕು ಚಲಾಯಿಸಬಹುದು. ಆದರೆ, ಕಾನೂನು ಜಾರಿಯಲ್ಲಿದ್ದರೆ ಪಾಲಿಸಲೇಬೇಕು. ಸರ್ಕಾರವು ಎಸ್‌ಐಟಿ ರಚಿಸಿರುವುದು ಅಧಿಸೂಚನೆಯೇ? ಅಧಿಸೂಚನೆಯಾಗಿದ್ದರೆ ಅದನ್ನು ಗೆಜೆಟ್‌ನಲ್ಲಿ ಪ್ರಕಟಿಸಿರಬೇಕು. ಸರ್ಕಾರ ಅಧಿಸೂಚನೆಯಲ್ಲಿ ಪ್ರಕಟಿಸಿರುವುದನ್ನು ಸಲ್ಲಿಸಬೇಕು. ಮೂಲ ರಿಟ್ ಅರ್ಜಿಯಲ್ಲಿ ದೂರುದಾರರಾಗಿರುವವರು ಮಧ್ಯಪ್ರವೇಶ ಕೋರಿದ್ದಾರೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದೆ. ಅವರ ವಾದವನ್ನು ಆಲಿಸಬೇಕಿಲ್ಲ. ಕುಮಾರಸ್ವಾಮಿ ಅವರು ತಮ್ಮ ಆಸ್ತಿಗಾಗಿ ಹೋರಾಟ ನಡೆಸುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಪರ ವಕೀಲ ನಿಶಾಂತ್ ವಾದ ಮಂಡಿಸಿದ್ರು
ಆಗ ನ್ಯಾಯಾಲಯಕ್ಕೆ ನೆರವಾಗಲಿ ಬಿಡಿ ಎಂದು ಪೀಠ ಹೇಳಿತು. ಆಗಬಹುದು. ಆದರೆ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ನ್ಯಾಯಾಲಯಕ್ಕೆ ನೆರವಾಗಲಿ. ಆದರೆ, ಇಂಪ್ಲೀಡ್ ಆಗುವುದು ಬೇಡ ಎಂದು ಕುಮಾರಸ್ವಾಮಿ ಪರ ವಕೀಲ ನಿಶಾಂತ್ ಹೇಳಿದ್ರು. ತನಿಖೆ ನಡೆಸಿ, ಎಸ್‌ಐಟಿ ವರದಿಯನ್ನು ಸರ್ಕಾರಕ್ಕೆ ನೀಡಲಿ ಬಿಡಿ ಎಂದು ಪೀಠ ಹೇಳಿದ್ರು
ಕುಮಾರಸ್ವಾಮಿ ಪರ ವಕೀಲ ನಿಶಾಂತ್ ತಮ್ಮ ವಾದ ಪೂರ್ಣಗೊಳಿಸಿದ ಬಳಿಕ. ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರ ಕೋರಿಕೆಯಂತೆ ಅರ್ಜಿಯನ್ನು ಆಗಸ್ಟ್ 6ರಂದು ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.