ಕೇರಳ : ಕೇರಳದಲ್ಲಿ (Kerala ) ಪರೀಕ್ಷೆ (Exam ) ಬರೆದು ಬರೋಬ್ಬರಿ 20 ವರ್ಷಗಳ ಕಾಲ ಕಾಯ್ದ ವ್ಯಕ್ತಿಯೊಬ್ಬರಿಗೆ ನಿವೃತ್ತಿಯಾಗುವ ವಯಸ್ಸಿನಲ್ಲಿ ಸರ್ಕಾರಿ ಕೆಲಸದ ನೇಮಕಾತಿ ಪತ್ರ (Appointment letter)ಕೈಸೇರಿರುವ ಅಚ್ಚರಿಯ ಘಟನೆ ನಡೆದಿದೆ.
ಕೇರಳದ 60 ವರ್ಷದ ಅಬ್ದುಲ್ ಮಜೀದ್‌ಗೆ 20 ವರ್ಷಗಳ ನಂತರ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ಬಂದಿದೆ. 2005ರಲ್ಲಿ ಅರ್ಜಿ ಸಲ್ಲಿಸಿದ್ದ ಇವರಿಗೆ ಈಗ ನಿವೃತ್ತಿ ವಯಸ್ಸಾದ 60 ದಾಟಿದ ನಂತರ ಪತ್ರ ತಲುಪಿದೆ.
20 ವರ್ಷಗಳ ಹಿಂದೆ ಬರೆದ ಪರೀಕ್ಷೆಗೆ ಈಗ ಕೆಲಸದ ಆಫರ್ ಬಂದಿರುವುದನ್ನು ನೋಡಿ ಮಜೀದ್ ದಂಗಾಗಿದ್ದಾರೆ.
2005 ರಲ್ಲಿ ‘ಪಾರ್ಟ್-ಟೈಮ್ ಜೂನಿಯರ್ ಅರೇಬಿಕ್ ಶಿಕ್ಷಕ’ ಹುದ್ದೆಗೆ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದಿದ್ದರು. ಆದರೆ, ಈ ನೇಮಕಾತಿ ಪ್ರಕ್ರಿಯೆಯು ಆಡಳಿತಾತ್ಮಕ ವಿಳಂಬ ಹಾಗೂ ಸುದೀರ್ಘ ಕಾನೂನು ಹೋರಾಟಗಳ ಸುಳಿಗೆ ಸಿಲುಕಿತ್ತು. ವರ್ಷಗಳು ಉರುಳಿದರೂ ಇಲಾಖೆ ಇದರತ್ತ ಗಮನ ಹರಿಸಿರಲಿಲ್ಲ. ಕೊನೆಗೂ ಎರಡು ದಶಕಗಳ ಬಳಿಕ ಇಲಾಖೆಯು ಅಧಿಕೃತ ನೇಮಕಾತಿ ಆದೇಶವನ್ನು ರವಾನಿಸಿದೆ.
ನೇಮಕಾತಿ ಪತ್ರ ಸಿಕ್ಕಿರುವುದು ಖುಷಿ ತಂದಿದ್ದರೂ, ನಿವೃತ್ತಿ ಹಂತದಲ್ಲಿ ಕೆಲಸ ಸಿಕ್ಕಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಕೆಲಸ ಮಾಡುವ ವಯಸ್ಸಿನಲ್ಲಿ ಅಲೆದಾಡಿಸಿ, ಈಗ ಕೆಲಸ ಕೊಟ್ಟರೆ ಏನು ಪ್ರಯೋಜನ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಮಂಡಳಿಗಳ ಆಮೆಗತಿಯ ಕೆಲಸದ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಪ್ರಸ್ತುತ ಉದ್ಯೋಗ ವಂಚಿತರಾಗಿರುವ ಮಜೀದ್ ಅವರಿಗೆ ಈಗ ಒಂದು ತಾಂತ್ರಿಕ ಅಂಶದಲ್ಲಿ ಸಣ್ಣ ಭರವಸೆ ಮೂಡಿದೆ. ಅವರ ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿಯ ಪ್ರಕಾರ ಅವರ ಜನ್ಮ ದಿನಾಂಕ ಮೇ 27, 1966 ಎಂದು ದಾಖಲಾಗಿದೆ (ಅದರಂತೆ ಅವರಿಗೆ 60 ವರ್ಷ ತುಂಬಿದೆ). ಆದರೆ, ತಮ್ಮ ನಿಜವಾದ ಜನ್ಮ ದಿನಾಂಕ ಮೇ 27, 1967 ಎಂದು ಮಜೀದ್ ವಾದಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ಅಥವಾ ಇಲಾಖೆ ಇವರ ಈ ದಾಖಲೆಯನ್ನು ಪರಿಶೀಲಿಸಿ ಜನ್ಮ ದಿನಾಂಕವನ್ನು ಸರಿಪಡಿಸಿದರೆ, ಇವರಿಗೆ ಸದ್ಯ 59 ವರ್ಷ ತುಂಬಿದಂತಾಗುತ್ತದೆ. ಆಗ ಇನ್ನು ಕನಿಷ್ಠ ಒಂದು ವರ್ಷವಾದರೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಇವರಿಗೆ ಕಾನೂನಾತ್ಮಕವಾಗಿ ಅರ್ಹತೆ ಸಿಗುತ್ತದೆ.
ಇದನ್ನೂ ಓದಿ : ಸೌರವ್ ಗಂಗೂಲಿ ಭದ್ರತೆ ಕಡಿತ- ‘Z’ ನಿಂದ ‘Y’ ಶ್ರೇಣಿಗೆ ಇಳಿಸಿದ ಪಶ್ಚಿಮ ಬಂಗಾಳ ಸರ್ಕಾರ