ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ಸಚಿವ ಸಂಪುಟ (Cabinet expansion) ವಿಸ್ತರಣೆಯು ಮುಂಬರುವ ಜುಲೈ 10 ರಂದು ನಡೆಯುವ ಸಾಧ್ಯತೆಯಿದ್ದು, ತಂತ್ರಗಾರಿಕೆ ಹಾಗೂ ಸಚಿವ ಸ್ಥಾನಕ್ಕಾಗಿ ಲಾಬಿ ಈಗಾಗಲೇ ಶುರುವಾಗಿದೆ. ಜುಲೈ 14 ರಿಂದ ಆಷಾಢ ಮಾಸ ಆರಂಭವಾಗಿ ಆಗಸ್ಟ್ 12 ರವರೆಗೆ ಮುಂದುವರಿಯಲಿರುವುದರಿಂದ, ಈ ಶುಭ ಮುಹೂರ್ತದ ಒಳಗಾಗಿಯೇ ಸಂಪುಟ ಭರ್ತಿ ಮಾಡಲು ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಸಜ್ಜಾಗಿದ್ದಾರೆ.
ಅಧಿವೇಶನದ ಅನಿವಾರ್ಯತೆಗೆ ಬಿದ್ದ ಕಾಂಗ್ರೆಸ್
ರಾಜ್ಯದಲ್ಲಿ ಪ್ರಸ್ತುತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿದ್ದು, ಬಿಎಲ್‌ಓಗಳು ಈ ತಿಂಗಳ ಅಂತ್ಯದವರೆಗೆ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಇದೇ ಕಾರಣಕ್ಕಾಗಿ ವಿಧಾನಮಂಡಲದ ಅಧಿವೇಶನವನ್ನು ಸದ್ಯ ಮುಂದೂಡಲಾಗಿದೆ. ಕೇಂದ್ರ ಚುನಾವಣಾ ಆಯೋಗವು ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಿದ್ದು, ಆ ನಂತರವೇ ಮಳೆಗಾಲದ ಅಧಿವೇಶನ ಸಮಾವೇಶಗೊಳ್ಳುವ ಸಾಧ್ಯತೆ ಇದೆ.
ಮತ್ತೊಂದೆಡೆ, ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲಾ ಜಿಲ್ಲೆಗಳಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಧ್ವಜಾರೋಹಣ ನೆರವೇರಿಸಬೇಕಾಗಿರುವುದರಿಂದ, ಅಧಿವೇಶನ ಹಾಗೂ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಪರಿಪೂರ್ಣ ಸಂಪುಟ ರಚನೆ ಮಾಡಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ.
ಸಿದ್ದರಾಮಯ್ಯ, ಖರ್ಗೆ ಭೇಟಿ ಮಾಡಿದ ನಾಯಕರು
ಸಂಪುಟ ವಿಸ್ತರಣೆಯ ಸುಳಿವು ಸಿಗುತ್ತಿದ್ದಂತೆ ಆಕಾಂಕ್ಷಿಗಳು ಹಿರಿಯ ನಾಯಕರ ಬೆನ್ನಿಗೆ ಬಿದ್ದಿದ್ದಾರೆ. ನಿನ್ನೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿರುವ ಶಾಸಕರುಗಳಾದ ಪಿ.ಎಂ. ಅಶೋಕ್, ಎ.ಎಸ್. ಪೊನ್ನಣ್ಣ, ಕೆ.ಎನ್. ರಾಜಣ್ಣ ಹಾಗೂ ಎಂ.ಆರ್. ಸೀತಾರಾಮ್ ಮತ್ತಿತರರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ಪರವಾಗಿ ಒತ್ತಡ ಹೇರಿದ್ದಾರೆ. ಇತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಂಪುಟ ರಚನೆಯ ಸೂತ್ರಗಳ ಕುರಿತು ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿದ್ದಾರೆ.
ಜುಲೈ 7 ಅಥವಾ 8ಕ್ಕೆ ದೆಹಲಿ ಫ್ಲೈಟ್
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಜುಲೈ 6 ರಂದು ತಮ್ಮ ಐರ್ಲ್ಯಾಂಡ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಲಿದ್ದಾರೆ. ಅವರು ವಾಪಸ್ ಬಂದ ತಕ್ಷಣವೇ ಅಂದರೆ ಜುಲೈ 7 ಅಥವಾ 8 ರಂದು ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ನವದೆಹಲಿಗೆ ತೆರಳಲಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಸಭೆ ನಡೆಸಿ ಪಟ್ಟಿಗೆ ಒಪ್ಪಿಗೆ ಪಡೆಯಲಾಗುತ್ತದೆ. ಹೈಕಮಾಂಡ್ ಹಸಿರು ನಿಶಾನೆ ನೀಡಿದರೆ ಜುಲೈ 12 ರ ಒಳಗಾಗಿ ಪ್ರಕ್ರಿಯೆ ಮುಗಿಯಲಿದ್ದು, ಸದ್ಯದ ಮೂಲಗಳ ಪ್ರಕಾರ ಜುಲೈ 10ರ ಶುಕ್ರವಾರದಂದೇ ಹೊಸ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮುಹೂರ್ತ ನಿಗದಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮೈಸೂರು ಸಿಗ್ನಲ್ ಅಳವಡಿಕೆ ಯೋಜನೆಯಲ್ಲಿ ಅಕ್ರಮ – ಸಂಸದ ಯದುವೀರ್ ಒಡೆಯರ್ ಆರೋಪ