Thursday, July 16, 2026
Homeಟಾಪ್ ನ್ಯೂಸ್KARAVE : 'ಮುರ' ಗ್ರಾಮ 'ಟ್ರೀ' ಆಯ್ತು!: ಮತದಾರರ ಪಟ್ಟಿಯಲ್ಲಿ ಭಾಷಾ ಅವಾಂತರ, ಸಂಪೂರ್ಣ ಪ್ರಕ್ರಿಯೆ...

KARAVE : ‘ಮುರ’ ಗ್ರಾಮ ‘ಟ್ರೀ’ ಆಯ್ತು!: ಮತದಾರರ ಪಟ್ಟಿಯಲ್ಲಿ ಭಾಷಾ ಅವಾಂತರ, ಸಂಪೂರ್ಣ ಪ್ರಕ್ರಿಯೆ ಕನ್ನಡದಲ್ಲೇ ಮಾಡಲು ಕರವೇ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (SIR) ಭಾಷಾ ಅನುವಾದದ ದೊಡ್ಡ ಎಡವಟ್ಟುಗಳು ಮುನ್ನೆಲೆಗೆ ಬಂದಿವೆ. ಕೇವಲ ಅಕ್ಷರ ದೋಷ ಹಾಗೂ ತಪ್ಪು ಅನುವಾದದ ಕಾರಣದಿಂದಾಗಿ ನಾಡಿನ ನಾಗರಿಕರು ತಮ್ಮ ಪವಿತ್ರವಾದ ಮತದಾನದ ಹಕ್ಕನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ಪ್ರಕ್ರಿಯೆಯು ಕಡ್ಡಾಯವಾಗಿ ಕನ್ನಡದಲ್ಲೇ ನಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (Karave) ರಾಜ್ಯ ಸರ್ಕಾರ (State Govt) ಹಾಗೂ ಚುನಾವಣಾ ಆಯೋಗವನ್ನು ತೀವ್ರವಾಗಿ ಆಗ್ರಹಿಸಿದೆ.

ರಾಜ್ಯಾದ್ಯಂತ ನಡೆಯುತ್ತಿರುವ ಈ ಪರಿಷ್ಕರಣೆ ಕಾರ್ಯದಲ್ಲಿ ಕನ್ನಡದ ಗ್ರಾಮಗಳ ಹೆಸರುಗಳು, ಮತಗಟ್ಟೆಗಳ ವಿವರಗಳು ಹಾಗೂ ಇತರೆ ಪ್ರಮುಖ ದತ್ತಾಂಶಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸುವಾಗ ಗಂಭೀರ ಅವಾಂತರಗಳನ್ನು ಸೃಷ್ಟಿಸಲಾಗುತ್ತಿದೆ. ಇದು ಮತದಾರರ ಗುರುತು, ವಾಸಸ್ಥಳದ ವಿಳಾಸ ಹಾಗೂ ಸರ್ಕಾರದ ಅಧಿಕೃತ ದಾಖಲೆಗಳ ವಿಶ್ವಾಸಾರ್ಹತೆಯ ಮೇಲೆಯೇ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ಈಗಾಗಲೇ ಇಂತಹ ನೂರಾರು ಎಡವಟ್ಟುಗಳು ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳಲ್ಲಿ ನಡೆದು ಉಂಟಾಗಿದ್ದ ಗೊಂದಲಗಳು ನಮ್ಮ ಕಣ್ಣಮುಂದಿವೆ. ಆದ್ದರಿಂದ ಇನ್ಮುಂದೆ ಮಾಹಿತಿ ದಾಖಲು ಮಾಡುವುದು ಮತ್ತು ದತ್ತಾಂಶ ಸಂಗ್ರಹಿಸುವ ಕೆಲಸ ತಾಯ್ನುಡಿಯಲ್ಲೇ ಆಗಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಒತ್ತಾಯಿಸಿದ್ದಾರೆ.

ಈ ಭಾಷಾ ತಂತ್ರಜ್ಞಾನದ ಎಡವಟ್ಟಿಗೆ ಉತ್ತಮ ಉದಾಹರಣೆಯೆಂದರೆ, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ‘ಮುರ’ ಎಂಬ ಗ್ರಾಮದಲ್ಲಿ ನಡೆದಿರುವ ಘಟನೆ. ಇಲ್ಲಿನ ಮತಗಟ್ಟೆಯ ಹೆಸರು ಮತದಾರರ ಪಟ್ಟಿಯ ಇಂಗ್ಲಿಷ್ ಆವೃತ್ತಿಯಲ್ಲಿ ನೇರವಾಗಿ ‘ಟ್ರೀ’ (Tree) ಎಂದು ಬದಲಾಗಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಮೊದಲು ‘ಮುರ’ ಎಂಬ ಗ್ರಾಮದ ಹೆಸರನ್ನು ‘ಮರ’ ಎಂದು ತಪ್ಪಾಗಿ ದಾಖಲಿಸಿದ್ದಾರೆ. ಆನಂತರ ಆ ‘ಮರ’ಕ್ಕೆ ಇಂಗ್ಲಿಷ್ ಪದವಾದ ‘ಟ್ರೀ’ ಎಂದು ಗೂಗಲ್ ಮಾದರಿಯಲ್ಲಿ ಅನುವಾದ ಮಾಡಿರುವುದು ಅತ್ಯಂತ ಬೇಜವಾಬ್ದಾರಿತನದ ಪರಮಾವಧಿಯಾಗಿದೆ. ಇದು ಕೇವಲ ಒಂದು ಸಣ್ಣ ಉದಾಹರಣೆಯಾಗಿದ್ದು, ಇಡೀ ರಾಜ್ಯದಾದ್ಯಂತ ಇಂತಹ ಸಾವಿರಾರು ದೋಷಗಳು ಈಗಾಗಲೇ ನಡೆದಿರುವ ಅಥವಾ ನಡೆಯುತ್ತಿರುವ ಸಾಧ್ಯತೆ ದಟ್ಟವಾಗಿದೆ ಎಂದು ಕರವೇ ಆತಂಕ ಹೊರಹಾಕಿದೆ.

ಕನ್ನಡ ನಾಡಿನ ಹಳ್ಳಿಗಳು, ವ್ಯಕ್ತಿಗಳ ಹೆಸರುಗಳು, ಕೆರೆ, ಹಳ್ಳಿ, ಕೋಟೆ, ಪಾಳ್ಯ, ಪೇಟೆ, ಬೀದಿ, ರಸ್ತೆ ಹಾಗೂ ವಾರ್ಡ್‌ಗಳ ಹೆಸರುಗಳಿಗೆ ತನ್ನದೇ ಆದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭೌಗೋಳಿಕ ಹಿನ್ನೆಲೆಯಿರುತ್ತದೆ. ಇಂತಹ ಸ್ಥಳನಾಮಗಳನ್ನು ಯಾವುದೇ ಕಾರಣಕ್ಕೂ ಅನ್ಯ ಭಾಷೆಗೆ ಅನುವಾದ ಮಾಡಬಾರದು. ಅವುಗಳ ಅರ್ಥವನ್ನೇ ಬದಲಿಸಿ ಇಂಗ್ಲಿಷ್‌ಗೆ ತರ್ಜುಮೆ ಮಾಡುವುದರಿಂದ ಸರಕಾರಿ ದಾಖಲೆಗಳ ಮೂಲಸ್ವರೂಪವೇ ವಿಕೃತಗೊಳ್ಳುತ್ತದೆ.

ಇದನ್ನೂ ಓದಿ : ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್ – ಶುರುವಾಯ್ತು ತಪಾಸಣೆ, ಬಾಡಿಗೆದಾರರಿಗೆ ಉಚಿತ ಕರೆಂಟ್ ಕಟ್ ಭೀತಿ!

ಹೀಗಾಗಿ, ದತ್ತಾಂಶ ನಮೂದು (Data Entry), ಪರಿಶೀಲನೆ ಹಾಗೂ ತಿದ್ದುಪಡಿ ಸೇರಿದಂತೆ ಮತದಾರರ ಪಟ್ಟಿಯ ಇಡೀ ಪ್ರಕ್ರಿಯೆಯ ಮೂಲ ದಾಖಲೆಗಳನ್ನು ಕನ್ನಡದಲ್ಲೇ ನಿರ್ವಹಿಸಬೇಕು. ಒಂದು ವೇಳೆ ಇಂಗ್ಲಿಷ್ ಬಳಕೆ ಅನಿವಾರ್ಯವಾಗಿದ್ದರೆ, ಕನ್ನಡ ಪದಗಳ ಉಚ್ಚಾರಣೆಯನ್ನು ಹಾಗೇ ಉಳಿಸಿಕೊಂಡು ಲಿಪ್ಯಂತರ (Transliteration – ಉದಾಹರಣೆಗೆ: Mura) ಮಾತ್ರ ಮಾಡಬೇಕೇ ಹೊರತು ಅರ್ಥಾನುವಾದ (Translation) ಮಾಡಬಾರದು ಎಂದು ಕರವೇ ಅಧ್ಯಕ್ಷರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಚುನಾವಣಾ ಕಾರ್ಯದಲ್ಲಿ ತೊಡಗಿರುವ ಮತ್ತು ಮತದಾರರ ಪಟ್ಟಿಯ ದತ್ತಾಂಶ ಸಿದ್ಧಪಡಿಸುವ ಸಿಬ್ಬಂದಿಗೆ ಕನ್ನಡ ಭಾಷೆ ಹಾಗೂ ಸ್ಥಳೀಯ ಇತಿಹಾಸದ ಕುರಿತು ಮೊದಲು ಸೂಕ್ತ ತರಬೇತಿ ನೀಡಬೇಕು. ಸಾರ್ವಜನಿಕರ ಹೆಸರು ಅಥವಾ ವಿಳಾಸದಲ್ಲಿ ಇಂತಹ ತಪ್ಪುಗಳು ಕಂಡುಬಂದಲ್ಲಿ ಅವುಗಳನ್ನು ತಕ್ಷಣವೇ ವರದಿ ಮಾಡಲು ಅನುಕೂಲವಾಗುವಂತೆ ವಿಶೇಷ ಸಹಾಯವಾಣಿ ಮತ್ತು ತ್ವರಿತ ತಿದ್ದುಪಡಿ ವ್ಯವಸ್ಥೆಯನ್ನು ಆಯೋಗ ಜಾರಿಗೆ ತರಬೇಕು ಎಂದು ಕರವೇ ಪ್ರಮುಖರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!