ಬೆಂಗಳೂರು: ವಿಧಾನಸೌಧದ(Vidhana Soudha) ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯಲ್ಲಿ ವೇದಮಂತ್ರಗಳ ಘೋಷದೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬೆನ್ನಲ್ಲೇ, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM. DK Shivakumar) ಅವರ ನೇತೃತ್ವದಲ್ಲಿ ಇವತ್ತು ಮೊದಲ ಸಚಿವ ಸಂಪುಟ (ಕ್ಯಾಬಿನೆಟ್) ಸಭೆ ನಡೆದಿದೆ. ವಿಧಾನಸೌಧದಲ್ಲಿ ನಡೆದ ಈ ಚೊಚ್ಚಲ ಕ್ಯಾಬಿನೆಟ್ ಸಭೆಯಲ್ಲಿ ನೂತನ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್(G.Parameshwar) ಹಾಗೂ ನೂತನವಾಗಿ ಪ್ರಮಾಣ ವಚನ(Oath) ಸ್ವೀಕರಿಸಿದ 12 ಸಚಿವರು ಭಾಗಿಯಾಗಿದ್ದರು. ಈ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ನೂತನ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಆಡಳಿತದ ದೃಷ್ಟಿಯಿಂದ ಹಲವು ಪ್ರಮುಖ ಕಿವಿಮಾತುಗಳನ್ನು ಹಾಗೂ ಸೂಚನೆಗಳನ್ನು ನೀಡಿದರು.
ಸಿದ್ದರಾಮಯ್ಯ ಅವರಿಗೆ ನೀಡಿದಂತೆಯೇ ನನಗೂ ಸಹಕಾರ ನೀಡಿ
ಸಭೆಯಲ್ಲಿ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತಾವೆಲ್ಲರೂ ಅವರಿಗೆ ಹೇಗೆ ಸಂಪೂರ್ಣ ಸಹಕಾರ ನೀಡಿದ್ದೀರೋ, ಅದೇ ರೀತಿಯ ಸಹಕಾರವನ್ನು ನನಗೂ ಕೂಡ ನೀಡಿ. ನಾವೆಲ್ಲರೂ ಒಟ್ಟಾಗಿ ಸೇರಿ ರಾಜ್ಯದ ಜನತೆಗೆ ಒಂದು ಅತ್ಯಂತ ಉತ್ತಮವಾದ ಆಡಳಿತವನ್ನು ನಡೆಸಿಕೊಂಡು ಹೋಗೋಣ ಎಂದು ಮನವಿ ಮಾಡಿದರು.
ಎರಡು ವರ್ಷಗಳ ಕಾಲ ಅತ್ಯುತ್ತಮ ಆಡಳಿತ
ಅಧಿಕಾರ ಹಂಚಿಕೆಯ ಸೂತ್ರದ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಸಿಎಂ ಡಿಕೆಶಿ, ನಮಗೆ ಸಿಕ್ಕಿರುವ ಈ ಅವಧಿಯಲ್ಲಿ, ಅಂದರೆ ಮುಂದಿನ ಎರಡು ವರ್ಷಗಳ ಕಾಲ ಜನ ಮೆಚ್ಚುವಂತಹ ಅತ್ಯುತ್ತಮ ಆಡಳಿತವನ್ನು ನೀಡೋಣ. ಆ ನಂತರ ಮತ್ತೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದೆ. ನಮ್ಮ ಉತ್ತಮ ಕೆಲಸಗಳ ಮೂಲಕ ಜನರ ವಿಶ್ವಾಸ ಗಳಿಸಿ, ಮುಂದಿನ ಚುನಾವಣೆಯಲ್ಲೂ ಮತ್ತೆ ಕಾಂಗ್ರೆಸ್ ಪಕ್ಷವನ್ನು ಭರ್ಜರಿಯಾಗಿ ಗೆಲ್ಲಿಸಿ, ಮತ್ತೊಮ್ಮೆ ಅಧಿಕಾರ ಹಿಡಿಯೋಣ ಎಂದು ಸಚಿವರಿಗೆ ಸ್ಪಷ್ಟ ಸೂಚನೆ ಹಾಗೂ ಗುರಿಯನ್ನು ನೀಡಿದರು.
ಇದು ಕೇವಲ ಮೊದಲ ಸಚಿವ ಸಂಪುಟ ಸಭೆಯಾಗಿದ್ದು, ಮುಂಬರುವ ದಿನಗಳಲ್ಲಿ ಸಂಪುಟ ಮತ್ತಷ್ಟು ವಿಸ್ತರಣೆಯಾಗಲಿದೆ ಎಂಬ ಸುಳಿವನ್ನು ಸಿಎಂ ನೀಡಿದರು. ಮುಂದಿನ ಸಚಿವ ಸಂಪುಟ ಸಭೆಗಳು ನಡೆಯುವಾಗ ನಮ್ಮ ಈ ತಂಡದ ಜೊತೆಗೆ ಮತ್ತಷ್ಟು ನಾಯಕರು ಸಚಿವರಾಗಿ ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ಅವರು ಇದೇ ವೇಳೆ ತಿಳಿಸಿದರು. ಚೊಚ್ಚಲ ಸಭೆಯಲ್ಲೇ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಮಹತ್ವದ ವಿಷಯವೊಂದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಯಾಗಿ ನಾನು ರಾಜ್ಯದ ಜನತೆಗಾಗಿ ಒಂದು ಹೊಸ ಯೋಜನೆಯನ್ನು ಘೋಷಣೆ ಮಾಡುತ್ತಿದ್ದೇನೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ನಿಮ್ಮೆಲ್ಲರ ಸಂಪೂರ್ಣ ಸಹಕಾರ ಅತ್ಯಗತ್ಯವಾಗಿ ಇರಬೇಕು ಎಂದು ಕೋರಿದರು.
ಇದನ್ನೂ ಓದಿ: ಸಿಎಂ ಕುರ್ಚಿ ಮೇಲೆ ಕೂರುವ ಮುನ್ನವೂ ದೈವ ಭಕ್ತಿ ಮೆರೆದ ಡಿಕೆಶಿ, ವಿಧಾನಸೌಧದ ಕಚೇರಿಯಲ್ಲಿ ವಿಶೇಷ ಪೂಜೆ, ವೇದಮಂತ್ರಗಳ ಘೋಷ-VIDEO