ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ (Karnataka Politics) ಬಿರುಸಿನ ಚಟುವಟಿಕೆ ಶುರುವಾಗಿದ್ದು ಸಚಿವ ಸಂಪುಟ ವಿಸ್ತರಣೆಯ (Cabinet Expansion) ಬೆನ್ನಲ್ಲೇ ರಾಜ್ಯದ ವಿವಿಧ ನಿಗಮ ಮತ್ತು ಮಂಡಳಿಗಳನ್ನು (Boards and Corporation) ಸಂಪೂರ್ಣವಾಗಿ ಪುನಾರಚನೆ ಮಾಡುವ ಸಾಧ್ಯತೆ ಇದೆ.
ಈ ಪ್ರಕ್ರಿಯೆಯಿಂದಾಗಿ ಹಾಲಿ ಅಧ್ಯಕ್ಷರ ಸ್ಥಾನಗಳಿಗೆ ಕುತ್ತು ಬರುವ ಸಾಧ್ಯತೆಯಿದ್ದು, ದೊಡ್ಡ ಮಟ್ಟದ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ.
50ಕ್ಕೂ ಹೆಚ್ಚು ಅಧ್ಯಕ್ಷರ ಬದಲಾವಣೆ
ಸದ್ಯದ ಮಾಹಿತಿಯ ಪ್ರಕಾರ, 35 ಶಾಸಕರು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ನಿಗಮ-ಮಂಡಳಿಗಳ ಅಧ್ಯಕ್ಷರನ್ನು ಬದಲಾಯಿಸಲು ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆದಿದೆ. ಸಚಿವ ಸಂಪುಟ ಕಸರತ್ತು ಮುಗಿಯುತ್ತಿದ್ದಂತೆಯೇ ಈ ಬದಲಾವಣೆ ಆರಂಭವಾಗಲಿದ್ದು, ಆಡಳಿತ ಯಂತ್ರಕ್ಕೆ ಚುರುಕು ನೀಡಲು ಮತ್ತು ಅಸಮಾಧಾನಿತ ನಾಯಕರನ್ನು ಸಮಾಧಾನಪಡಿಸಲು ಈ ತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.
ವಿಧಾನಪರಿಷತ್‌ನ 5 ಸ್ಥಾನಗಳಿಗೆ ತೀವ್ರ ಪೈಪೋಟಿ
ಇದೇ ತಿಂಗಳ 21ರಂದು ವಿಧಾನಪರಿಷತ್‌ನ ಐದು ಸ್ಥಾನಗಳು ತೆರವಾಗುತ್ತಿದ್ದು, ಈ ಸ್ಥಾನಗಳಿಗೆ ಹೊಸದಾಗಿ ನಾಮನಿರ್ದೇಶನ ಮಾಡಬೇಕಾಗಿದೆ. ಸದ್ಯ ಪರಿಷತ್ ಸದಸ್ಯರಾಗಿರುವ ರಮೇಶ್ ಬಾಬು, ಎಚ್.ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತಾರಾಮ್ ಸಿದ್ಧಿ ಮತ್ತು ಡಾ. ತಳವಾರ್ ಸಾಬಣ್ಣ ಅವರ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ ಈ ತೆರವು ಉಂಟಾಗುತ್ತಿದೆ. ಈ ಸ್ಥಾನಗಳನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ನ ಹಲವು ಹಿರಿಯ ಮುಖಂಡರು ಈಗಿನಿಂದಲೇ ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ.
ದೆಹಲಿ ಭೇಟಿಯ ವೇಳೆ ಹೈಕಮಾಂಡ್ ಜೊತೆ ಚರ್ಚೆ
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಯ ಕುರಿತು ಚರ್ಚಿಸಲು ದೆಹಲಿಗೆ ಪ್ರವಾಸ ಬೆಳೆಸಲಿದ್ದು, ಈ ಸಂದರ್ಭದಲ್ಲಿ ಎಐಸಿಸಿ ರಾಷ್ಟ್ರೀಯ ನಾಯಕರೊಂದಿಗೆ ನಿಗಮ-ಮಂಡಳಿ ನೇಮಕಾತಿ ಮತ್ತು ಪರಿಷತ್ ನಾಮನಿರ್ದೇಶನದ ಬಗ್ಗೆಯೂ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಹೈಕಮಾಂಡ್ ಹಸಿರು ನಿಶಾನೆ ನೀಡಿದ ತಕ್ಷಣವೇ ಹೊಸ ಪಟ್ಟಿ ಅಧಿಕೃತವಾಗಿ ಹೊರಬೀಳಲಿದೆ.
ಸಾಧಕರ ಕೋಟಾದ ಮೇಲೆ ಕಣ್ಣಿಟ್ಟ ನಾಯಕರು
ಶಿಕ್ಷಣ, ಸಮಾಜ ಸೇವೆ ಸೇರಿದಂತೆ ನಾನಾ ಕ್ಷೇತ್ರಗಳ ಸಾಧಕರ ಕೋಟಾದ ಅಡಿಯಲ್ಲಿ ಈ ಬಾರಿ ನಾಮನಿರ್ದೇಶನ ನಡೆಯಬೇಕಿದೆ. ಆದರೆ ರಾಜಕೀಯವಾಗಿ ಸಕ್ರಿಯರಾಗಿರುವ ಪಕ್ಷದ ನಾಯಕರು ತಮಗೆ ಶಿಕ್ಷಣ ಅಥವಾ ಸಮಾಜ ಸೇವೆಯ ಹೆಸರಿನಲ್ಲಿ ಅವಕಾಶ ನೀಡಬೇಕು ಎಂದು ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಈ ಐದು ಸ್ಥಾನಗಳು ಯಾರ ಪಾಲಾಗಲಿವೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ತೆರೆಬೀಳಲಿದೆ.
ಇದನ್ನೂ ಓದಿ : ಕನಿಷ್ಠ ವೇತನ ಅಂತಿಮ ಅಧಿಸೂಚನೆ ಮರುಪರಿಶೀಲನೆ ಬೇಡ ಎಂದ ಟ್ರೇಡ್ ಯೂನಿಯನ್, ಸಿಎಂಗೆ ವಿಶೇಷ ಮನವಿ