ಕೊಪ್ಪಳ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಿರಿಯ ಅಧಿಕಾರಿಯಾಗಿದ್ದ ಎಲ್.ಕೆ. ಅತೀಕ್ ಅವರನ್ನು ತಮ್ಮ ಆರ್ಥಿಕ ಸಲಹೆಗಾರರನ್ನಾಗಿ (Karnataka Politics) ನೇಮಕ ಮಾಡಿ ಹೊರಡಿಸಿರುವ ಆದೇಶದ ಕುರಿತು ಹಿರಿಯ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳು ನನ್ನನ್ನು ಹುದ್ದೆಯಿಂದ ತೆಗೆದುಹಾಕಿಲ್ಲ, ಸಿಎಂ ಬದಲಾವಣೆಯಾದ ನಂತರ ಹೊಸ ನೇಮಕಾತಿ ಮಾಡುವುದು ಸಹಜ ಪ್ರಕ್ರಿಯೆ ಎಂದು ಹೇಳುವ ಮೂಲಕ ಈ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅತ್ಯಾಪ್ತರಾಗಿದ್ದರೂ ಸಹ ಬಸವರಾಜ ರಾಯರೆಡ್ಡಿ ಅವರಿಗೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಸಿಎಂ ಡಿ.ಕೆ. ಶಿವಕುಮಾರ್ ಅವರು ಎಲ್.ಕೆ. ಅತೀಕ್ ಅವರನ್ನು ಹೊಸ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಸಿಎಂ ಬದಲಾವಣೆ ನಂತರ ಹೊಸ ಆರ್ಡರ್ ತಪ್ಪಲ್ಲ
ಈ ನೇಮಕಾತಿಯ ಬೆನ್ನಲ್ಲೇ ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಯರೆಡ್ಡಿ, ರಾಜಕೀಯ ವಲಯದಲ್ಲಿ ಎದ್ದಿರುವ ಅಸಮಾಧಾನದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರ ಹುದ್ದೆಯಿಂದ ನನ್ನನ್ನು ಯಾರೂ ಕೈಬಿಟ್ಟಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯಾದ ನಂತರ, ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು ತಮಗೆ ಬೇಕಾದ ಮತ್ತೊಬ್ಬರನ್ನು ಈ ಹುದ್ದೆಗೆ ನೇಮಕ ಮಾಡಿಕೊಂಡಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಆಡಳಿತಾತ್ಮಕವಾಗಿ ಅವರು ಹೊಸ ಆರ್ಡರ್ ಮಾಡಲೇಬೇಕಿತ್ತಲ್ಲವೇ? ಹಾಗಾಗಿ ಆದೇಶ ಮಾಡಿದ್ದಾರೆ, ಎಂದು ಸ್ಪಷ್ಟಪಡಿಸಿದರು.
ಡಿ.ಕೆ. ಶಿವಕುಮಾರ್ ನನ್ನ ವಿರುದ್ಧವಾಗಿಲ್ಲ
ಮುಂದುವರಿದು ಮಾತನಾಡಿದ ಅವರು, ಈ ನಿರ್ಧಾರದಿಂದ ತಮಗೇನೂ ಬೇಸರವಾಗಿಲ್ಲ ಎಂಬುದನ್ನು ಹೇಳಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ನನ್ನ ವಿರುದ್ಧವಾಗಿಲ್ಲ. ಆಡಳಿತದ ಸುಗಮ ನಿರ್ವಹಣೆಗೆ ಇಂತಹ ಬದಲಾವಣೆಗಳು ರಾಜಕಾರಣದಲ್ಲಿ ತೀರಾ ಸಾಮಾನ್ಯ, ಎನ್ನುವ ಮೂಲಕ ತಮ್ಮ ಮತ್ತು ಸಿಎಂ ನಡುವೆ ಯಾವುದೇ ಶೀತಲ ಸಮರ ಇಲ್ಲ ಎಂಬುದನ್ನು ರಾಯರೆಡ್ಡಿ ಬಿಂಬಿಸಿದ್ದಾರೆ.
ಇದನ್ನೂ ಓದಿ: ಮಳೆಗಾಲದ ಅಧಿವೇಶನ ಮುಗಿಯುವವರೆಗೆ ಕೇಂದ್ರ ಸಂಪುಟ ಪುನಾರಚನೆ ಅಸಾಧ್ಯ!?