ನವದೆಹಲಿ: ನಾಳೆ ಸಂಜೆ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಪದಗ್ರಹಣ ಮಾಡಲಿರುವ ಬೆನ್ನಲ್ಲೇ, ದೇಶದ ರಾಜಧಾನಿ ದೆಹಲಿಯಲ್ಲಿ (Delhi) ಹೊಸ ಸಚಿವ ಸಂಪುಟ ರಚನೆಗೆ (Cabinet) ಸಂಬಂಧಿಸಿದಂತೆ ಹೈವೋಲ್ಟೇಜ್ ಮೀಟಿಂಗ್‌ಗಳು ನಡೆದಿವೆ.
ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಅವರ ನೇತೃತ್ವದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸರಣಿ ಸಭೆಗಳ ಬಳಿಕ, ಮೊದಲ ಹಂತದ ಸಚಿವರ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದೆ. ರಾತ್ರಿ ಅಥವಾ ನಾಳೆ ಬೆಳಗ್ಗೆ ಒಳಗೆ ಹೈಕಮಾಂಡ್‌ನಿಂದ ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.
ಮೊದಲ ಹಂತದಲ್ಲಿ 10 ರಿಂದ 12 ಮಂದಿಗೆ ಮಂತ್ರಿಗಿರಿ
ನಾಳೆ ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಮೊದಲ ಹಂತದಲ್ಲಿ 12 ಮಂದಿ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ಹೈಕಮಾಂಡ್ ಮೊದಲ ಹಂತದ ಈ ಸಣ್ಣ ಸಂಪುಟಕ್ಕೆ ಒಪ್ಪಿಗೆ ಸೂಚಿಸಿದೆ. ಉಳಿದ ಸ್ಥಾನಗಳನ್ನು ಮುಂದಿನ ದಿನಗಳಲ್ಲಿ ಭರ್ತಿ ಮಾಡಲು ತೀರ್ಮಾನಿಸಲಾಗಿದೆ. ಈ ಬಾರಿಯ ಮೊದಲ ಪಟ್ಟಿಯಲ್ಲಿ ಹಿರಿಯ ನಾಯಕರ ನಡುವೆ ಕೇವಲ ಇಬ್ಬರು ಹೊಸಬರಿಗಷ್ಟೇ ಸ್ಥಾನ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಅವರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನ ಫಿಕ್ಸ್ ಆಗಿದೆ.
ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 12 ನಾಯಕರು
- ಡಾ. ಜಿ. ಪರಮೇಶ್ವರ್
- ಎಂ.ಬಿ. ಪಾಟೀಲ್
- ರಾಮಲಿಂಗಾರೆಡ್ಡಿ
- ಸತೀಶ್ ಜಾರಕಿಹೊಳಿ
- ಕೃಷ್ಣಬೈರೇಗೌಡ / ಕೆ.ಜೆ. ಜಾರ್ಜ್
- ಪ್ರಿಯಾಂಕ್ ಖರ್ಗೆ
- ಈಶ್ವರ ಖಂಡ್ರೆ
- ಯು.ಟಿ. ಖಾದರ್
- ಶಿವರಾಜ ತಂಗಡಗಿ
- ಡಾ. ಯತೀಂದ್ರ ಸಿದ್ದರಾಮಯ್ಯ
- ರೂಪಾ ಶಶಿಧರ್
ಮಂತ್ರಿಗಿರಿಗಾಗಿ ನಾಯಕರ ಬೆಂಬಲಿಗರ ಹೈಡ್ರಾಮ
ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯ್ ಸಿಂಗ್ ಅವರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿ ಅವರ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸೊನ್ನ ಕ್ರಾಸ್ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಅಭಿಮಾನಿಗಳು ರಸ್ತೆಯ ಮೇಲೆಯೇ ಹೊರಳಾಡಿ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ಸೊನ್ನ ಕ್ರಾಸ್ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತು, ಕೆಲ ಕಾಲ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಜಯ್ ಸಿಂಗ್ ಅವರಿಗೆ ಈ ಬಾರಿ ಮಂತ್ರಿಗಿರಿ ನೀಡಲೇಬೇಕು ಎಂದು ಹೈಕಮಾಂಡ್‌ಗೆ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ.
ಮರಾಠ ಕ್ಷತ್ರಿಯ ಸಮಾಜದಿಂದ ಎಚ್ಚರಿಕೆ
ಇನ್ನೊಂದೆಡೆ, ಹಿರಿಯ ನಾಯಕ ಸಂತೋಷ್ ಲಾಡ್ ಅವರಿಗೆ ಹೊಸ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಧಾರವಾಡದಲ್ಲಿ ಮರಾಠ ಕ್ಷತ್ರಿಯ ಸಮಾಜದ ಮುಖಂಡರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಪ್ರಮುಖ ಮುಖಂಡ ಮೋಹನ್ ಮೋರೆ, ರಾಜ್ಯದಲ್ಲಿ 60 ಲಕ್ಷಕ್ಕೂ ಅಧಿಕ ಮರಾಠಾ ಕ್ಷತ್ರಿಯ ಸಮಾಜದ ಜನರಿದ್ದಾರೆ. ಈ ಬಾರಿ ನಮ್ಮ ಸಮಾಜದಿಂದ ಇಬ್ಬರು ಶಾಸಕರು ಆಯ್ಕೆಯಾಗಿದ್ದಾರೆ. ಹಾಗಾಗಿ ಇಬ್ಬರಿಗೂ ಹೊಸ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು, ಎಂದು ಸರ್ಕಾರವನ್ನು ಆಗ್ರಹಿಸಿದರು.
ಈಗಾಗಲೇ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿರುವ ಸಂತೋಷ್ ಲಾಡ್ ಅವರಿಗೆ ಮುಂಬರುವ ಸಂಪುಟದಲ್ಲೂ ಇದೇ ಖಾತೆ ಅಥವಾ ಇದಕ್ಕಿಂತ ಹೆಚ್ಚಿನ ಜವಾಬ್ದಾರಿಯುತ ಖಾತೆಯನ್ನು ನೀಡಬೇಕು, ಎಂದು ಅವರು ಒತ್ತಾಯಿಸಿದರು. ಒಂದು ವೇಳೆ ಹೊಸ ಸಂಪುಟ ರಚನೆಯಲ್ಲಿ ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡದೆ ಕೈಬಿಟ್ಟರೆ, ಮುಂಬರುವ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಮರಾಠಾ ಸಮಾಜದ ವತಿಯಿಂದ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮೋಹನ್ ಮೋರೆ ಅವರು ನೂತನ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಒಂದು ಕಡೆ ಪ್ರತಿಭಟನೆ ನಡೆಯುತ್ತಿದ್ರೆ, ಮತ್ತೊಂದು ಕಡೆ ಹೈಕಮಾಂಡ್ ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡಲು ಪಟ್ಟಿ ಹಿಡಿದು ಲೆಕ್ಕಾಚಾರದಲ್ಲಿ ತೊಡಗಿದೆ. 12 ಸ್ಥಾನಗಳ ಪೈಕಿ 7 ಮಂದಿಯ ಆಯ್ಕೆ ಸಂಪೂರ್ಣ ಫೈನಲ್ ಆಗಿದ್ದು, ಇನ್ನುಳಿದ 5 ಸ್ಥಾನಗಳ ಸಮೀಕರಣದ ಕುರಿತು ಕೆ.ಸಿ. ವೇಣುಗೋಪಾಲ್ ಅವರ ನಿವಾಸದಲ್ಲಿ ಅಂತಿಮ ಸುತ್ತಿನ ಚರ್ಚೆಗಳು ಮುಂದುವರಿದಿವೆ. ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳಲು ಹೈಕಮಾಂಡ್ ಕಸರತ್ತು ನಡೆಸುತ್ತಿದ್ದು, ಸಭೆಯ ಮುಕ್ತಾಯದ ಬೆನ್ನಲ್ಲೇ ಅಧಿಕೃತ ಲಿಸ್ಟ್ ಹೊರಬೀಳಲಿದೆ.
ಇದನ್ನೂ ಓದಿ : ನಾಳೆ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಕಾರ್ಯಕ್ರಮ – ಹೇಗಿದೆ ಭದ್ರತೆ?