ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳಿಗೆ ಹಾಗೂ ಈ ಪ್ರಕ್ರಿಯೆಯನ್ನು ನಿರ್ವಹಿಸುತ್ತಿರುವ ಚುನಾವಣಾ ಆಯೋಗದ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಎಸ್‌ಐಆರ್ ಗೊಂದಲಗಳಿಗೆ ರಾಜ್ಯ ಸರ್ಕಾರ ಕಾರಣವಲ್ಲ, ಆಯೋಗವೇ ನೇರ ಹೊಣೆ. ಚುನಾವಣಾ ಆಯೋಗ ಕತ್ತೆ ಕಾಯ್ತಾ ಇದೆಯಾ? ಜವಾಬ್ದಾರಿ ಅವರದ್ದೇ ತಾನೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎಸ್‌ಐಆರ್ ಪ್ರಕ್ರಿಯೆಯ ಸುತ್ತಲಿನ ಆತಂಕಗಳು ಮತ್ತು ವಿಪಕ್ಷಗಳ ಹೇಳಿಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ರೂಲ್ಸ್ ಮಾಡೋದು ನಾವಲ್ಲ, ಆಯೋಗ ಉತ್ತರ ನೀಡಲಿ”
ಎಸ್‌ಐಆರ್ ಲೋಪದ ಕುರಿತಾದ ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಏನೇ ಮಾಡಿದರೂ ಕಾನೂನು ಮೀರಿ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ವೀಕ್ಷಕರು ಇದ್ದೇ ಇರುತ್ತಾರೆ. ಒಂದು ವೇಳೆ ಎಲ್ಲಾದರೂ ಲೋಪವಾಗಿದ್ದರೆ ಕ್ರಮ ತೆಗೆದುಕೊಳ್ಳಲು ಆಯೋಗಕ್ಕೆ ಮುಕ್ತ ಅಧಿಕಾರವಿದೆ. ರಾಜ್ಯ ಸರ್ಕಾರದವರೇನೂ ಯಾರಿಗೂ ಒತ್ತಾಯ ಮಾಡಿ ಎಸ್‌ಐಆರ್ ಮಾಡಿಸುತ್ತಿಲ್ಲ. ಸಮುದಾಯ ಭವನದಲ್ಲೋ ಇಲ್ಲವೇ ಕಚೇರಿಯಲ್ಲೋ ಕುಳಿತು ಮಾಡಿ ಎಂದು ನಾವು ಯಾರಿಗೂ ಬಲವಂತ ಮಾಡಿಲ್ಲ, ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಸಂಶಯಗಳಿರುವುದು ನಿಜ. ಈ ಹಿನ್ನೆಲೆಯಲ್ಲಿ ನಾವು ಚುನಾವಣಾ ಆಯೋಗಕ್ಕೆ 12 ಪ್ರಮುಖ ಪ್ರಶ್ನೆಗಳನ್ನು ಕೇಳಿ ಪತ್ರ ಬರೆದಿದ್ದೆವು. ಆದರೆ ಆಯೋಗ ಇದುವರೆಗೆ ಒಂದಕ್ಕೂ ಉತ್ತರಿಸಿಲ್ಲ. ಇದಕ್ಕೆ ಹೊಣೆ ಯಾರು? ಅನುಮಾನಗಳು ಇವೆ ಎಂದರೆ ಅದಕ್ಕೆ ರಾಜ್ಯ ಸರ್ಕಾರ ಹೊಣೆಯಲ್ಲ, ಚುನಾವಣಾ ಆಯೋಗವೇ ಉತ್ತರಿಸಬೇಕು, ಎಂದು ಒತ್ತಾಯಿಸಿದರು.
ಬಿಎಲ್‌ಓಗಳು ನಮ್ಮ ಅಧೀನದಲ್ಲಿದ್ದರೂ ಆಜ್ಞೆ ಆಯೋಗದ್ದೇ!
ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ನಮ್ಮ ಆಡಳಿತ ವ್ಯವಸ್ಥೆಯ ಅಡಿಯಲ್ಲೇ ಬಂದರೂ, ಅವರಿಗೆ ನಿರ್ದೇಶನ ಹಾಗೂ ಗೈಡ್‌ಲೈನ್ಸ್ ಕೊಡುವುದು ಚುನಾವಣಾ ಆಯೋಗ. ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂದಾದರೆ ಆಯೋಗವೇ ಕ್ರಮ ಕೈಗೊಳ್ಳಬೇಕು, ಎಂದ ಸಚಿವರು, ಬಿಎಲ್‌ಓಗಳ ಫೋಟೋ ವಿವಾದದ ಕುರಿತು ಮಾತನಾಡುತ್ತಾ ಜಯನಗರದ ಉದಾಹರಣೆ ನೀಡಿದರು. ಜಯನಗರದಲ್ಲಿ ಏನಾಯಿತು? ಅಲ್ಲಿ ನಮ್ಮ ಶಾಸಕರಿದ್ದಾರಾ? ಅಲ್ಲಿ ಬಿಎಲ್‌ಓ ಆಗಿ ಯಾರು ಇದ್ದಾರೆ? ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರಿಗೋಸ್ಕರ ಇದರಲ್ಲಿ ಶ್ರಮಿಸುತ್ತಿದ್ದಾರೆ. ಆದರೆ, ಫೋಟೋ ಹಾಕಬಾರದು ಎಂಬ ಕೆಲವು ಮಾನದಂಡಗಳಿವೆ, ಅದನ್ನು ಪಾಲಿಸಬೇಕು, ಎಂದರು.
ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಲ್ಲಿ ಆತಂಕ
ಎಸ್‌ಐಆರ್ ಅನ್ನೋದು ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿಲ್ಲ, ಎಲ್ಲಾ ಸಮುದಾಯಗಳದ್ದೂ ನಡೆಯುತ್ತಿದೆ. ಆದರೆ, ಸದ್ಯಕ್ಕೆ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರಲ್ಲಿ ಆತಂಕ ಮೂಡಿದೆ. ಬಿಹಾರ ಮತ್ತು ಬಂಗಾಳದಂತಹ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಎಸ್‌ಐಆರ್ ಪಟ್ಟಿ ಇದ್ದರೆ ಮಾತ್ರ ರಾಜ್ಯ ಹಾಗೂ ಕೇಂದ್ರದ ಯೋಜನೆಗಳು ಸಿಗುತ್ತವೆ ಎಂದು ಕಡ್ಡಾಯ ಮಾಡಿವೆ. ಇಂತಹ ಗೊಂದಲ ಮತ್ತು ಆತಂಕಗಳನ್ನು ನಿವಾರಿಸಬೇಕಾದ್ದು ಚುನಾವಣಾ ಆಯೋಗದ ಕರ್ತವ್ಯ. ನಾವು ಸ್ಪಷ್ಟನೆಗಾಗಿ ಕಾಲಾವಕಾಶ ಕೇಳಿದರೂ ಆಯೋಗ ಸಮಯ ನೀಡುತ್ತಿಲ್ಲ, ಎಂದು ಅಸಮಾಧಾನ ಹೊರಹಾಕಿದರು.
ಕುಮಾರಸ್ವಾಮಿ, ಶೋಭಾ ಕರಂದ್ಲಾಜೆಗೆ ತಿರುಗೇಟು
ಕೇಂದ್ರ ಚುನಾವಣಾ ಆಯೋಗದ ಮೂಲಕವೇ ಎಸ್‌ಐಆರ್ ಪ್ರಕ್ರಿಯೆಯನ್ನು ಮಾನಿಟರ್ (ಮೇಲ್ವಿಚಾರಣೆ) ಮಾಡಿಸಬೇಕು ಎಂಬ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಕೇಂದ್ರದಲ್ಲಿ ನಿಮ್ಮದೇ ಬಿಜೆಪಿ ನೇತೃತ್ವದ ಸರ್ಕಾರ ಇಲ್ವಾ? ನಿಮ್ಮ ಕೈಯಲ್ಲೇ ಅಧಿಕಾರ ಇದೆ, ತಕ್ಷಣವೇ ಕೇಂದ್ರ ಸರ್ಕಾರದಿಂದ ಮಾನಿಟರ್ ಮಾಡಿಸಿ, ಯಾರು ಬೇಡ ಅಂದಿದ್ದಾರೆ? ನಾವು ಯಾವುದೇ ಕಾರಣಕ್ಕೂ ಎಸ್‌ಐಆರ್ ವಿರೋಧಿಗಳಲ್ಲ. ಆದರೆ ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಅನ್ನೋದು ನಮ್ಮ ಏಕೈಕ ಒತ್ತಾಯ. ಆದರೆ, ಇಲ್ಲಿ ಚುನಾವಣಾ ಆಯೋಗವೇ ಸ್ವತಃ ಆತಂಕ ಸೃಷ್ಟಿಯಾಗಲು ಬಿಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಶಾಲಾ ಶಿಕ್ಷಣ ಇಲಾಖೆ ಬೋಧಕೇತರ ಸಿಬ್ಬಂದಿ ವರ್ಗಾವಣೆ ವೇಳಾಪಟ್ಟಿ ಪ್ರಕಟ