ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ವೋಟರ್ ಲಿಸ್ಟ್ ಸಿದ್ಧಪಡಿಸುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳ ನಡುವೆ ಹೊಸದೊಂದು ಕಾನೂನು ಸಮರ ಶುರುವಾಗಿದೆ. ಕೇಂದ್ರದ ನಿಯಮಗಳನ್ನು ಬದಿಗಿಟ್ಟು ಬೆಂಗಳೂರಿನ (Bengaluru) ಕೆಲವು ವಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ಮತದಾರರ ಪಟ್ಟಿ ಪರಿಷ್ಕರಣೆ (SIR) ನಡೆಸಲು ಮುಂದಾಗಿರುವ ರಾಜ್ಯ ಚುನಾವಣಾ ಆಯೋಗದ ಇಕ್ಕಟ್ಟಿನ ನಿರ್ಧಾರವನ್ನು ಈಗ ಹೈಕೋರ್ಟ್‌ನಲ್ಲಿ (High Court) ಪ್ರಶ್ನಿಸಲಾಗಿದೆ.
ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ವಿಷಯದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ, ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಆಕ್ಷೇಪವೇನು?
ಎಂ. ವಿವೇಕ್ ಸೇರಿದಂತೆ ಒಟ್ಟು ಐದು ಜನ ನಾಗರಿಕರು ಹೈಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯ ಚುನಾವಣಾ ಆಯೋಗವು ಜೂನ್ 19ರಂದು ಹೊರಡಿಸಿರುವ ವಿವಾದಾತ್ಮಕ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿದ್ದಾರೆ. ಸದ್ಯ ಹೈಕೋರ್ಟ್ ನೋಟಿಸ್‌ಗೆ ಪ್ರತಿಕ್ರಿಯಿಸಲು ಕಾಲಾವಕಾಶ ಕೇಳಿರುವ ಸರ್ಕಾರಕ್ಕೆ ಕೋರ್ಟ್ ಜುಲೈ 15ರವರೆಗೆ ಗಡುವು ನೀಡಿದೆ.
ಕೇಂದ್ರ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಕಡೆಗಣಿಸಿ ರಾಜ್ಯ ಆಯೋಗವು ಪ್ರತ್ಯೇಕವಾಗಿ ನಡೆಸುತ್ತಿರುವ ಈ ಮನೆ ಮನೆ ಸರ್ವೇಯಿಂದಾಗಿ ರಾಜಧಾನಿಯ ಲಕ್ಷಾಂತರ ಮತದಾರರಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ ಎನ್ನುವುದು ಅರ್ಜಿದಾರರ ಪ್ರಮುಖ ವಾದವಾಗಿದೆ.
ಕೇಂದ್ರದ ನಿಯಮಕ್ಕೆ ತದ್ವಿರುದ್ಧ ನಡಾವಳಿ
ಕೇಂದ್ರ ಸರ್ಕಾರವು ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ (SIR) ನಡೆಸುವುದಾಗಿ ಕಳೆದ 2025ರ ಅಕ್ಟೋಬರ್‌ನಲ್ಲೇ ಘೋಷಿಸಿತ್ತು. ಅದರ ಮುಂದುವರಿದ ಭಾಗವಾಗಿ, ಜೂನ್ 16ರಂದು ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ‘ಫ್ರೀಜ್’ ಮಾಡಲಾಗಿತ್ತು. ಇಷ್ಟೇ ಅಲ್ಲದೆ, ಕೇಂದ್ರದ ಆದೇಶದಂತೆ ಜೂನ್ 26ರಿಂದ ಇಡೀ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಸರ್ವೇ ಮಾಡುವ ಪ್ರಕ್ರಿಯೆಯೂ ಈಗಾಗಲೇ ಜಾರಿಯಲ್ಲಿದೆ.
ಹೀಗೆ ಕೇಂದ್ರದ ಪ್ರಕ್ರಿಯೆ ನಡೆಯುತ್ತಿರುವಾಗಲೇ, ರಾಜ್ಯ ಚುನಾವಣಾ ಆಯೋಗವು ಜೂನ್ 19ರಂದು ದಿಢೀರ್ ಆಗಿ ಜಿಬಿಎ ವ್ಯಾಪ್ತಿಯ ಕೆಲವು ವಾರ್ಡ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಮತ್ತೊಂದು ಪರ್ಯಾಯ ಸರ್ವೇಗೆ ಆದೇಶಿಸಿದೆ.
ಒಂದೇ ಸಮಯದಲ್ಲಿ ಒಂದೇ ಉದ್ದೇಶಕ್ಕಾಗಿ ಎರಡು ಪ್ರತ್ಯೇಕ ಆಯೋಗಗಳು ಮನೆ ಬಾಗಿಲಿಗೆ ಬಂದರೆ ಸಾರ್ವಜನಿಕರು ಯಾರಿಗೆ ಸರಿಯಾದ ದಾಖಲೆ ನೀಡಬೇಕು? ಇದು ಕೇವಲ ಗೊಂದಲ ಮಾತ್ರವಲ್ಲದೆ, ಸರ್ಕಾರದ ಸಂಪನ್ಮೂಲ ಮತ್ತು ಸಾರ್ವಜನಿಕರ ಹಣವನ್ನು ಪೋಲು ಮಾಡುವ ಕ್ರಮವಾಗಿದೆ. ಆದ್ದರಿಂದ ರಾಜ್ಯ ಚುನಾವಣಾ ಆಯೋಗದ ಈ ಏಕಪಕ್ಷೀಯ ಆದೇಶಕ್ಕೆ ತಕ್ಷಣವೇ ತಡೆ ನೀಡಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ.