ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ಆದೇಶದಿಂದಾಗಿ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಭೀತಿ ಎದುರಿಸುವಂತಾಗಿದೆ.
ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಕಚೇರಿಯ ಮೇಲೆ ಕೆಲದಿನಗಳ ಹಿಂದೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಸಂಸ್ಥೆಯೊಂದರಿಂದ ಕೋಟ್ಯಂತರ ರೂ. ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಪ್ರಶಾಂತ್ ಮಾಡಾಳ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಮುಂದುವರೆದ ತನಿಖೆಯ ಭಾಗವಾಗಿ, ಪ್ರಶಾಂತ್ ಮಾಡಾಳ್ ನಿವಾಸದ ಮೇಲೂ ದಾಳಿ ನಡೆಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಶಾಂತ್ ಮಾಡಾಳ್‍ನ ಹಲವು ಅಕ್ರಮಗಳು ಹೊರಗೆ ಬಂದಿತ್ತು. ಇದೇ ವೇಳೆ ಕೆಎಸ್‍ಡಿಎಲ್ ನಿಗಮಕ್ಕೆ ಮಾಡಾಳ್ ರಾಜೀನಾಮೆ ನೀಡಿದ್ದರು.
ಕೆಎಸ್‍ಡಿಎಲ್ ಟೆಂಡರ್ ಪ್ರಕ್ರಿಯೆಗೆ ಲಂಚ ಪಡೆದ ಆರೋಪದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಪ್ರಮುಖ ಆರೋಪಿಯಾಗಿದ್ದಾರೆ. ಈಗ ನಿರೀಕ್ಷಣಾ ಜಾಮೀನು ವಜಾಗೊಂಡಿರುವುದರಿಂದ ಅಧಿಕಾರಿಗಳು ಯಾವ ಕ್ಷಣದಲ್ಲಾದರೂ ಮಾಡಾಳ್ ಅವರನ್ನು ಬಂಧಿಸುವ ಸಾಧ್ಯತೆ ಇದೆ.