ಬೆಂಗಳೂರು: ವಿಶ್ವದಾದ್ಯಂತ ಎಬೋಲಾ ವೈರಸ್ ಕಾಯಿಲೆ (Ebola Virus Disease) ಅತ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು (WHO) ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ (PHEIC) ಘೋಷಿಸಿದೆ. ಇದರ ಬೆನ್ನಲ್ಲೇ ತೀವ್ರ ಎಚ್ಚೆತ್ತುಕೊಂಡಿರುವ ಕರ್ನಾಟಕ(Karnataka) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಇಡೀ ರಾಜ್ಯಾದ್ಯಂತ ಹರಡುವಿಕೆಯನ್ನು ತಡೆಯಲು ಮತ್ತು ಕಟ್ಟುನಿಟ್ಟಿನ ನಿಗಾ ವಹಿಸಲು ಅಧಿಕೃತ ಸುತ್ತೋಲೆ ಹೊರಡಿಸಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ವೈದ್ಯಕೀಯ ಸಂಸ್ಥೆಗಳು (KPME) ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಎಬೋಲಾ ರೋಗದ ಲಕ್ಷಣಗಳು ಕಂಡುಬರುವ ರೋಗಿಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಆದೇಶಿಸಲಾಗಿದೆ.
ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಿಶೇಷ ವಾರ್ಡ್‌ಗಳ ವ್ಯವಸ್ಥೆ
ವಿದೇಶದಿಂದ ಬರುವ ಪ್ರಯಾಣಿಕರಿಂದ ರೋಗ ಹರಡುವ ಸಾಧ್ಯತೆ ಇರುವುದರಿಂದ ರಾಜ್ಯದ ಪ್ರಮುಖ ಹೆಬ್ಬಾಗಿಲುಗಳಾದ ಬೆಂಗಳೂರು ಮತ್ತು ಮಂಗಳೂರಿನ ಆಸ್ಪತ್ರೆಗಳನ್ನು ಹೈ ಅಲರ್ಟ್‌ನಲ್ಲಿಡಲಾಗಿದೆ. ಬೆಂಗಳೂರು ಭಾಗದಲ್ಲಿ ಶಂಕಿತರನ್ನು ಪ್ರತ್ಯೇಕವಾಗಿಡಲು ‘ಸಾಂಕ್ರಾಮಿಕ ರೋಗಗಳ ಆಸ್ಪತ್ರೆ’ಯಲ್ಲಿ (Epidemic Disease Hospital) ಕ್ವಾರಂಟೈನ್ ಸೌಲಭ್ಯ ಹಾಗೂ ಸೂಕ್ತ ಚಿಕಿತ್ಸೆಗಾಗಿ ‘ರಾಜೀವ್ ಗಾಂಧಿ ಸಂಸ್ಥೆ’ಯನ್ನು (RGICD ಆಸ್ಪತ್ರೆ) ಐಸೊಲೇಶನ್ ಕೇಂದ್ರವಾಗಿ ಗುರುತಿಸಲಾಗಿದೆ.
ಇನ್ನು, ಮಂಗಳೂರು ಭಾಗದಲ್ಲಿ ‘ಶ್ರೀನಿವಾಸ್ ಪೋರ್ಟ್ ಆಸ್ಪತ್ರೆ’ಯಲ್ಲಿ (NMPA) ಕ್ವಾರಂಟೈನ್ ವ್ಯವಸ್ಥೆ ಮತ್ತು ಐತಿಹಾಸಿಕ ‘ವೆನ್ಲಾಕ್ ಆಸ್ಪತ್ರೆ’ಯಲ್ಲಿ ಐಸೊಲೇಶನ್ ಹಾಗೂ ಚಿಕಿತ್ಸಾ ಘಟಕವನ್ನು ಸನ್ನದ್ಧಗೊಳಿಸಲಾಗಿದೆ. ಶಂಕಿತ ರೋಗಿಗಳನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ಆಂಬ್ಯುಲೆನ್ಸ್ ಸೇವೆಗಳನ್ನು ಕಾಯ್ದಿರಿಸಲಾಗಿದೆ.
ಆನ್‌ಲೈನ್ ದಾಖಲಾತಿ ಕಡ್ಡಾಯ
ಯಾವುದೇ ಆರೋಗ್ಯ ಕೇಂದ್ರದಲ್ಲಿ ಎಬೋಲಾ ಶಂಕಿತ ಪ್ರಕರಣ ಬೆಳಕಿಗೆ ಬಂದಲ್ಲಿ, ಅದನ್ನು ತಕ್ಷಣವೇ ‘ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್‌ಫಾರ್ಮ್’ (IHIP) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಜೊತೆಗೆ ವಿಳಂಬ ಮಾಡದೆ ಆಯಾ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಿಗೆ (DSO) ಮಾಹಿತಿ ನೀಡಬೇಕು. ಶಂಕಿತರ ರಕ್ತದ ಮಾದರಿಗಳನ್ನು ಜಿಲ್ಲಾ ಘಟಕದ ಮೂಲಕ ಮೊದಲು ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಕೇಂದ್ರಕ್ಕೆ ಹಾಗೂ ಅಲ್ಲಿಂದ ಅಂತಿಮ ದೃಢೀಕರಣಕ್ಕಾಗಿ ಪುಣೆಯ ಪ್ರಧಾನ ICMR-NIV ಪ್ರಯೋಗಾಲಯಕ್ಕೆ ರವಾನಿಸಲು ವ್ಯವಸ್ಥೆ ಮಾಡಲಾಗಿದೆ.
ಏರ್‌ಪೋರ್ಟ್ ಮತ್ತು ಬಂದರುಗಳಲ್ಲಿ ತೀವ್ರ ಸ್ಕ್ರೀನಿಂಗ್
ಆಫ್ರಿಕನ್ ದೇಶಗಳಿಂದ ವಿಮಾನ ಹಾಗೂ ಹಡಗುಗಳ ಮೂಲಕ ಬರುವ ಪ್ರತಿಯೊಬ್ಬ ಪ್ರಯಾಣಿಕನನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲು ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣದ ಆರೋಗ್ಯ ಪ್ರಾಧಿಕಾರಕ್ಕೆ (Airport Health Authority) ಮತ್ತು ಮಂಗಳೂರು ಬಂದರಿನ ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಟ್ಟು ಅನಗತ್ಯವಾಗಿ ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿರುವ ಇಲಾಖೆಯು, ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗಾಗಿ ವೈಯಕ್ತಿಕ ರಕ್ಷಣಾ ಸಾಧನಗಳನ್ನು (PPE Kits) ಈಗಾಗಲೇ ಪೂರೈಸುತ್ತಿರುವುದಾಗಿ ತಿಳಿಸಿದೆ.
ಇದನ್ನೂ ಓದಿ: ಆಫ್ರಿಕಾ ಖಂಡಕ್ಕೆ ಭಾರತದ ನೆರವಿನ ಹಸ್ತ! 43 ಟನ್ ವೈದ್ಯಕೀಯ ಸಾಮಗ್ರಿ ರವಾನಿಸಿದ ಜೈಶಂಕರ್!