Monday, June 15, 2026
Homeಟಾಪ್ ನ್ಯೂಸ್FUEL: ಪೆಟ್ರೋಲ್.. ಡೀಸೆಲ್ ಶೇಖರಣೆ ಮಾಡಿಟ್ಟುಕೊಳ್ಳುತ್ತಿರುವವರೇ ಗಮನಿಸಿ..

FUEL: ಪೆಟ್ರೋಲ್.. ಡೀಸೆಲ್ ಶೇಖರಣೆ ಮಾಡಿಟ್ಟುಕೊಳ್ಳುತ್ತಿರುವವರೇ ಗಮನಿಸಿ..

ಬೆಂಗಳೂರು: ರಾಜ್ಯದಲ್ಲಿ ಇಂಧನ (Fuel) ಕೊರತೆಯಾಗಲಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕ ಸ್ಪಷ್ಟಪಡಿಸಿದ್ದಾರೆ.

ನಿಶ್ಚಿಂತರಾಗಿರಿ ಎಂದ ಸಿದ್ಧಾರ್ಥ್ ಅಗರ್ವಾಲ್
ಸಾರ್ವಜನಿಕರು ಯಾವುದೇ ಗೊಂದಲವಿಲ್ಲದೆ ನಿಶ್ಚಿಂತರಾಗಿರಲು ಮತ್ತು ತಮ್ಮ ದೈನಂದಿನ ಸಾಮಾನ್ಯ ಇಂಧನ ಬಳಕೆಯನ್ನು ಎಂದಿನಂತೆ ಮುಂದುವರಿಸಿ ಎಂದು ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕರಾದ (IOCL, BPCL ಮತ್ತು HPCL) ಸಿದ್ಧಾರ್ಥ್ ಅಗರ್ವಾಲ್ ತಿಳಿಸಿದ್ದಾರೆ.  ಕರ್ನಾಟಕದಾದ್ಯಂತ ಜನರಿಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡಲು ತೈಲ ಕಂಪನಿಗಳು ಸಂಪೂರ್ಣವಾಗಿ ಬದ್ಧವಾಗಿವೆ ಮತ್ತು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ಹೀಗಾಗಿ ಸಾರ್ವಜನಿಕರು ಗಾಳಿಸುದ್ದಿಗಳನ್ನು ನಂಬಿ ಆತಂಕದಿಂದ ಪೆಟ್ರೋಲ್ ಬಂಕ್‌ಗಳಿಗೆ ಮುಗಿಬೀಳುವುದು ಅಥವಾ ಮುನ್ನೆಚ್ಚರಿಕೆ ಕ್ರಮ ಎಂಬಂತೆ ಅನಗತ್ಯವಾಗಿ ಅತಿಯಾಗಿ ಇಂಧನವನ್ನು ಸಂಗ್ರಹಿಸಿಟ್ಟುಕೊಳ್ಳುವ ಕೆಲಸಕ್ಕೆ ಕೈಹಾಕಬಾರದು ಎಂದು ಮನವಿ ಮಾಡಲಾಗಿದೆ.

ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ
ಇಡೀ ರಾಜ್ಯದ ಪ್ರತಿಯೊಂದು ಪ್ರದೇಶದಲ್ಲೂ ತಡೆರಹಿತವಾಗಿ ಇಂಧನ ಲಭ್ಯವಿರುವಂತೆ ನೋಡಿಕೊಳ್ಳಲು ತೈಲ ಉದ್ಯಮವು ನಿರಂತರವಾಗಿ ಶ್ರಮಿಸುತ್ತಿದೆ. ಇದಕ್ಕಾಗಿ ಸರಬರಾಜು ಪ್ರಕ್ರಿಯೆ, ದಾಸ್ತಾನು ಚಲನೆ ಹಾಗೂ ಚಿಲ್ಲರೆ ಮಾರಾಟದ ಕಾರ್ಯಾಚರಣೆಗಳನ್ನು ಅಧಿಕಾರಿಗಳು ಅತ್ಯಂತ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿರುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಕಂಪನಿಗಳ ಒಕ್ಕೂಟ ತಿಳಿಸಿದೆ.

ರಷ್ಯಾದ ತೈಲ ವಿನಾಯಿತಿ ರದ್ದು: ಭಾರತದಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಭೀತಿ?

ಭಾರತದ (India) ಇಂಧನ ಮಾರುಕಟ್ಟೆಗೆ ಮತ್ತೊಂದು ಭಾರಿ ಆಘಾತ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ರಷ್ಯಾದ ಕಚ್ಚಾ ತೈಲದ (Russian Oil) ಮೇಲಿದ್ದ ನಿರ್ಬಂಧಗಳ ವಿನಾಯಿತಿಯನ್ನು ಕೊನೆಗೊಳಿಸಲು ಅಮೆರಿಕದ (America) ಡೊನಾಲ್ಡ್ ಟ್ರಂಪ್ (Donald Trump) ಸರ್ಕಾರ ನಿರ್ಧರಿಸಿದ್ದು, ಇದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ (Fuel Price) ಮೇಲೆ ನೇರ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸುವ ಮೂಲಕ ಭಾರತವು ಜಾಗತಿಕ ತೈಲ ಬೆಲೆ ಏರಿಕೆಯ ಬಿಸಿಯಿಂದ ಸ್ವಲ್ಪ ಮಟ್ಟಿಗೆ ಪಾರಾಗಿತ್ತು. ಆದರೆ ಅಮೆರಿಕದ ಈ ಹೊಸ ನಿರ್ಧಾರದಿಂದಾಗಿ ಭಾರತದ ಇಂಧನ ಲೆಕ್ಕಾಚಾರ ತಲೆಕೆಳಗಾಗುವ ಆತಂಕ ಎದುರಾಗಿದೆ.

ಒಂದೆಡೆ ಇರಾನ್ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣೆಯ ಜಲಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ ನಲ್ಲಿ ಹಡಗುಗಳ ಸಂಚಾರ ಮಂದಗತಿಯಾಗಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲೇ ರಷ್ಯಾ ತೈಲದ ಮೇಲಿನ ಅಮೆರಿಕದ ವಿನಾಯಿತಿಯೂ ಮುಕ್ತಾಯಗೊಂಡಿರುವುದು ಭಾರತಕ್ಕೆ ಇಕ್ಕಟ್ಟಿನ ಪರಿಸ್ಥಿತಿಯನ್ನು ತಂದಿಟ್ಟಿದೆ. ಈಗಾಗಲೇ ದೇಶದಲ್ಲಿ ಇಂಧನ ದರಗಳು ಲೀಟರ್‌ಗೆ ಸುಮಾರು ಮೂರು ರೂಪಾಯಿಗಳಷ್ಟು ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ದುಬಾರಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.

ಇದನ್ನೂ ಓದಿ: ತೈಲದರ ಏರಿಕೆ ಹಿನ್ನೆಲೆ ವಿಂಡ್ ಫಾಲ್ ಟ್ಯಾಕ್ಸ್ ಜಾರಿ – ಏನು ಹಾಗೆಂದರೆ?

ಹೆಚ್ಚಿನ ಸುದ್ದಿ

Change Language »
error: Content is protected !!