Sunday, May 17, 2026
Homeಟಾಪ್ ನ್ಯೂಸ್STRAY DOGS: ಬೀದಿನಾಯಿ ನಿಯಂತ್ರಣ ಕ್ರಮದ ಬಗ್ಗೆ ಸುಪ್ರೀಂಗೆ ವರದಿ ಸಲ್ಲಿಸಿದ ರಾಜ್ಯ ಸರ್ಕಾರ

STRAY DOGS: ಬೀದಿನಾಯಿ ನಿಯಂತ್ರಣ ಕ್ರಮದ ಬಗ್ಗೆ ಸುಪ್ರೀಂಗೆ ವರದಿ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ ಅನೇಕ ರಾಜ್ಯಗಳಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿ ಆಗುತ್ತಿದೆ. ಬೀದಿ ನಾಯಿ ದಾಳಿಗಳ ಪ್ರಕರಣಗಳು ಜಾಸ್ತಿ ಆಗುತ್ತಿರುವ ಕಾರಣದಿಂದ ಇದನ್ನ ಗಮನಿಸಿದ ಸುಪ್ರೀಂಕೋರ್ಟ್‌ ಸ್ವಯಂ ಪ್ರೇರಿತವಾಗಿ ವಿಚಾರಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಯಾವೆಲ್ಲಾ ರಾಜ್ಯಗಳು ಯಾವ ರೀತಿ ಕ್ರಮಗಳನ್ನ ತೆಗೆದುಕೊಂಡಿದೆ ಎನ್ನುವ ಬಗ್ಗೆ ವರದಿಯನ್ನ ಕೇಳಿತ್ತು. ಈ ಕಾರಣದಿಂದ ರಾಜ್ಯ ಸರ್ಕಾರ ಬೀದಿ ನಾಯಿಗಳ (Stray Dogs) ವಿಚಾರವಾಗಿ ಸುಪ್ರೀಂಕೋರ್ಟ್‌ಗೆ (Supreme Court) ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ಏನೆಲ್ಲಾ ಇದೆ ಎಂಬುದು ಇಲ್ಲಿದೆ.

2023 ರಲ್ಲಿ ಮಾಡಲಾದ ಬೀದಿ ನಾಯಿಗಳ ಗಣತಿ ಪ್ರಕಾರ GBA ವ್ಯಾಪ್ತಿಯಲ್ಲಿ ಒಟ್ಟು 2,66,968 ಬೀದಿನಾಯಿಗಳಿವೆ ಎಂದು  ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಿರುವ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಲ್ಲಿ ವಿಭಾಗವಾರು ಬೀದಿನಾಯಿಗಳ ಸಂಖ್ಯೆ

  • ಬೆಂಗಳೂರು ಉತ್ತರ-51,433
  • ಬೆಂಗಳೂರು ದಕ್ಷಿಣ- 56,247
  • ಬೆಂಗಳೂರು ಪೂರ್ವ- 61,367
  • ಬೆಂಗಳೂರು ಪಶ್ಚಿಮ- 63,340

ಇನ್ನು ಬೀದಿ ನಾಯಿಗಳಿಂದ ಆಗುತ್ತಿರುವ ಸಮಸ್ಯೆಗಳು, ಕೆಲವೊಂದು ಆಕ್ರಮಣಕಾರಿ ಆಗಿರುವ ನಾಯಿಗಳ ಬಗ್ಗೆ ದೂರು ದಾಖಲು ಮಾಡಲು ರಾಜ್ಯ ಸರ್ಕಾರ ಟೋಲ್‌ ಫ್ರೀ ಹೆಲ್ಪ್‌ಲೈನ್‌ ನಂಬರ್‌ಗಳನ್ನ ಸಹ ಶುರು ಮಾಡಿದೆ. ಅಲ್ಲದೇ, ನಾಯಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷವನ್ನ ಕಡಿಮೆ ಮಾಡಲು ಸುಮಾರು 400 ನಾಯಿಗಳ ಆಹಾರ ಸ್ಥಳವನ್ನ ಸಹ ಗುರುತು ಮಾಡಲಾಗಿದೆ. ಈಗಾಗಲೇ 88,572 ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ‌ ಹಾಕಲಾಗಿದ್ದು, 2024-25ರಲ್ಲಿ ಸುಮಾರು 35,891 ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಕೂಡ ಮಾಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ಕೊಟ್ಟಿದೆ.

ಇದನ್ನೂ ಓದಿ : ಜಾಗಿಂಗ್ ಮಾಡುತ್ತಿದ್ದ ಬ್ರಿಟನ್ ಉದ್ಯಮಿ ಮೇಲೆ ಬೀದಿನಾಯಿ ದಾಳಿ!

ಪ್ರತಿದಿನ ಆಗುತ್ತಿರುವ ನಾಯಿ ಸಂತಾನ ಹರಣ ಚಿಕಿತ್ಸೆ ಮಾಹಿತಿ

  • ಬೆಂಗಳೂರು ಉತ್ತರ- 26
  • ಬೆಂಗಳೂರು ದಕ್ಷಿಣ – 27
  • ಬೆಂಗಳೂರು ಪೂರ್ವ- 20
  • ಬೆಂಗಳೂರು ಪಶ್ಚಿಮ- 35

ಇನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 21 ಬೀದಿ ನಾಯಿ ಹಿಡಿಯುವ ವಾಹನಗಳು ಇದೆ. ಅಲ್ಲದೇ, ರಾಜ್ಯ ಪಶು ಸಂಗೋಪನಾ ಇಲಾಖೆಯ ಕಡೆಯಿಂದ ಪ್ರತಿ 5 ವರ್ಷಕ್ಕೆ ಒಮ್ಮೆ ಬೀದಿ ನಾಯಿಗಳ ಗಣತಿ ಸಹ ಮಾಡಲಾಗುತ್ತದೆ. ಅದರಂತೆ 2019 ರಲ್ಲಿ ಮಾಡಲಾದ ಗಣತಿ ಪ್ರಕಾರ ಪುರಸಭೆಗಳ ವ್ಯಾಪ್ತಿಯಲ್ಲಿ ಸುಮಾರು 3,03,303 ಬೀದಿ ನಾಯಿಗಳು ಇದೆ. ಅವುಗಳನ್ನ ಹಿಡಿಯಲು ಮತ್ತು ಸಾಗಿಸುವ ಕೆಲಸ ಮಾಡಲು 197 ವಿಶೇಷವಾಗಿ ವಿನ್ಯಾಸ ಮಾಡಲಾದ ವಾಹನಗಳು ಹಾಗೂ ಪಂಜರಗಳೂ ಸಹ ಇದೆ ಎಂದು ಸರ್ಕಾರ ತಿಳಿಸಿದೆ.

ಇನ್ನು ಈ ಬೀದಿ ನಾಯಿಗಳನ್ನ ಸುರಕ್ಷಿತವಾಗಿ ಇಡುವ ನಿಟ್ಟಿನಲ್ಲಿ 91 ಡಾಗ್ ಪೌಂಡ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಹಾಗೆಯೇ, ಈ ಬೀದಿ ನಾಯಿಗಳನ್ನ ಹಿಡಿಯಲು ಪುರಸಭೆಗಳಾದ್ಯಂತ ಸುಮಾರು 301 ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. ಅಲ್ಲದೇ, ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಸಾಮೂಹಿಕ ಬಂಜೆತನ ಅಭಿಯಾನದ ಮೂಲಕ 60,662 ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಸಹ ಮಾಡಲಾಗಿದೆ. ಹಾಗೆಯೇ, ಬೀದಿ ನಾಯಿ ದಾಳಿ ಹಾಗೂ ಆಕ್ರಮಣಕಾರಿ ನಾಯಿಗಳ ಬಗ್ಗೆ ಮಾಹಿತಿ ನೀಡಲು ಎಲ್ಲಾ ಪುರಸಭೆಗಳಲ್ಲಿ ಸಹಾಯವಾಣಿಗಳನ್ನ ಸಹ ಆರಂಭ ಮಾಡಲಾಗಿದ್ದು, ಅದು ಸಹ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಒಟ್ಟಾರೆ ಈ ವರ್ಷದ ಜನವರಿಯಿಂದ ಇಲ್ಲಿಯ ವರೆಗೆ ಸುಮಾರು 4,026 ಬೀದಿ ನಾಯಿ ದಾಳಿಗಳ ದೂರು ಬಂದಿದ್ದು, ಅವುಗಳನ್ನ ಸ್ವೀಕರಿಸಿ ತಕ್ಷಣವೇ ಪರಿಹಾರ ನೀಡಲಾಗಿದೆ ಎಂದು ಸರ್ಕಾರ ಸುಪ್ರೀಂಗೆ ಮಾಹಿತಿ ನೀಡಿದೆ.

 

ಹೆಚ್ಚಿನ ಸುದ್ದಿ

Change Language »
error: Content is protected !!