ಬಾಗಲಕೋಟೆ: ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಇಂದು ಪ್ರಕಟಿಸಿದೆ. ಬಾಗಲಕೋಟೆ ವಿಧಾನ ಸಭಾ ಮತಕ್ಷೇತ್ರದಿಂದ ಮಾಜಿ ಸಚಿವ ಎಚ್.ವೈ.ಮೇಟಿ ಅವರಿಗೆ ಟಿಕೆಟ್ ನೀಡಿದೆ.
ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಹುಲ್ಲಪ್ಪ ವೈ ಮೇಟಿ ಅವರ ರಾಸಲೀಲೆ ಸಿಡಿ ಬಿಡುಗಡೆಯಾದ ಬೆನ್ನಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಂತರದ ವರ್ಷದಲ್ಲಿ ಸಿಡಿ ಪ್ರಕರಣದಲ್ಲಿ ಮೇಟಿಗೆ ಸಿಐಡಿ ಕ್ಲೀನ್ ಚಿಟ್ ಕೂಡಾ ನೀಡಿತ್ತು.
ಸರ್ಕಾರಿ ಅಧಿಕಾರಿಯೊಬ್ಬರೊಂದಿಗೆ ಸರ್ಕಾರಿ ಕಛೇರಿಯಲ್ಲೇ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣದಿಂದ ಮೇಟಿ ಅವರ ರಾಜಕೀಯ ಜೀವನವೇ ಕೊನೆಯಾಗುತ್ತದೆ ಅಂದುಕೊಳ್ಳುತ್ತಿರುವಾಗಲೇ ಕಾಂಗ್ರೆಸ್ ಅವರಿಗೆ ಮತ್ತೊಂದು ಅವಕಾಶವನ್ನು ಮಾಡಿಕೊಟ್ಟಿದೆ.
ಮೇಟಿ ಅವರ ಭದ್ರಕೋಟೆಯಾಗಿದ್ದ ಬಾಗಲಕೋಟೆಯಲ್ಲಿ 2018 ರ ಚುನಾವಣೆಯಲ್ಲಿ ಮೇಟಿ ಬಿಜೆಪಿ ಅಭ್ಯರ್ಥಿ ಎದುರು ಪರಾಜಯಗೊಂಡಿದ್ದರು. ಬಿಜೆಪಿ ಪರ ಇದ್ದ ಅಲೆ ಹಾಗೂ ರಾಸಲೀಲೆ ಸಿಡಿ ಬಿಡುಗಡೆಯಾಗಿ ಹೆಸರಿಗೆ ಕಳಂಕ ಮೆತ್ತಿಕೊಂಡಿದ್ದರಿಂದ ಮೇಟಿ ಸೋಲಬೇಕಾಗಿತ್ತು.