Sunday, November 10, 2024
Homeಟಾಪ್ ನ್ಯೂಸ್ರಂಗೇರುತ್ತಿದೆ ಕರ್ನಾಟಕ ಚುನಾವಣಾ ಕಣ: ರಾಜ್ಯಕ್ಕೆ ಮೋದಿ-ಶಾ ಮತ್ತೆ ಭೇಟಿ

ರಂಗೇರುತ್ತಿದೆ ಕರ್ನಾಟಕ ಚುನಾವಣಾ ಕಣ: ರಾಜ್ಯಕ್ಕೆ ಮೋದಿ-ಶಾ ಮತ್ತೆ ಭೇಟಿ

ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರಿದೆ. 2024 ರ ಲೋಕಸಭಾ ಚುನಾವಣೆಗೆ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶವು ದಿಕ್ಸೂಚಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಯ ಹೈಕಮಾಂಡ್‌ ಕರ್ನಾಟಕ ಚುನಾವಣೆ ಮೇಲೆ ಗಂಭೀರ ಗಮನ ಹರಿಸುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆಪಿ ನಡ್ಡಾ ಪದೇ ಪದೇ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.

ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡಲು ಸಜ್ಜಾಗಿದ್ದಾರೆ. ಮಾರ್ಚ್ 24 ಮತ್ತು 26ರಂದು ಅಮಿತ್‌ ಶಾ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ರಂದು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚುನಾವಣೆ ಸನ್ನಿಹಿತವಾಗಿರುವುದರಿಂದ ಪ್ರತಿ ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ವಿವಿಧ ಸಮುದಾಯಗಳ ನಾಯಕರ ಹಲವು ಪ್ರತಿಮೆಗಳನ್ನು ಉದ್ಘಾಟಿಸುವ ಕೆಲಸ ಭರದಿಂದಲೇ ಸಾಗುತ್ತಿದೆ. ಅಮಿತ್‌ ಶಾ ಅವರು ರಾಜ್ಯ ಪ್ರವಾಸದಲ್ಲಿ ಮೂರು ಪ್ರತಿಮೆಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಾರ್ಚ್ 26 ರಂದು ಬೀದರ್ ಜಿಲ್ಲೆಯ ಗೊರ್ಟಾ ಗ್ರಾಮದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಅನಾವರಣಗೊಳಿಸಲಿದ್ದು, ಅದೇ ದಿನ ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ನಾಡಪ್ರಭು ಕೆಂಪೇಗೌಡರ ಹಾಗೂ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ಅಮಿತ್‌ ಶಾ ಉದ್ಘಾಟಿಸಲಿದ್ದಾರೆ.

ಮೂರು ತಿಂಗಳಲ್ಲಿ ಕರ್ನಾಟಕಕ್ಕೆ‌ ಏಳನೇ ಬಾರಿ ಪ್ರಧಾನಿ ಮೋದಿ ವಿಸಿಟ್.!

ಇನ್ನು, ಇತ್ತೀಚೆಗಷ್ಟೇ ಬೆಂಗಳೂರು-ಮೈಸೂರು ದಶಪಥ ಉದ್ಘಾಟನೆಗೆ ಬಂದಿದ್ದ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆ ಮೂಲಕ ಮೂರು ತಿಂಗಳಲ್ಲಿ ಏಳನೇ ಬಾರಿ ಪಿಎಂ ಮೋದಿ ಕರ್ನಾಟಕಕ್ಕೆ ಕಾಲಿಡುತ್ತಿದ್ದಾರೆ. ಮಾ. 25 ರಂದು ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!