ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಬದಲಾವಣೆ (Power Sharing) ಚರ್ಚೆಯ ನಡುವೆ ಕೆಪಿಸಿಸಿ (KPCC) ಅಧ್ಯಕ್ಷ ಪಟ್ಟವೂ ಬದಲಾಗುತ್ತದೆಯಾ ಎಂಬ ಚರ್ಚೆ ತೆರಮರೆಯಲ್ಲಿ ನಡೆಯುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಇದ್ದಾರೆ. ಹೀಗಾಗಿ ಅಧ್ಯಕ್ಷ ಪಟ್ಟಕ್ಕಾಗಿ ಬೇಕಾದ ಎಲ್ಲಾ ತಯಾರಿಯನ್ನು ಅವರು ಮಾಡುತ್ತಿದ್ದಾರಾ? ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗುವುದು ಖಚಿತವಾಯಿತೇ ಎಂಬ ಅನುಮಾನಗಳಿಗೆ ಪುಷ್ಟಿ ನೀಡುವಂತಹ ಬೆಳವಣಿಗೆಗಳು ನಡೆದಿವೆ.
ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಲ್ಲ. ಕೋಲಾರ ಉಸ್ತುವಾರಿಯೂ ಅಲ್ಲ. ಆದರೂ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೋಲಾರದ ಮಾಲೂರು ತಾಲೂಕು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಗುರುವಾರವಷ್ಟೇ ಮಾಲೂರು ಮುಖಂಡ ಎನ್.ವೆಂಕಟರಾಮ್ ಎಂಬವರು ಸತೀಶ್ ಅವರ ಬೆಂಗಳೂರಿನ ಗೃಹ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ನಮ್ಮ ಜೊತೆ ಇದ್ದವರೇ ಅವರು ವಾಪಸ್ ಬಂದಿದ್ದಾರೆ ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ: ಡಿಕೆಶಿ ಮನೆಗೆ ಪ್ರಿಯಾಂಕ್ ಖರ್ಗೆ ದೌಡು- ಒಂದು ತಾಸು ಗುಪ್ತ ಚರ್ಚೆ!
ಇನ್ನು ಈ ನಡುವೆ ಸತೀಶ್ ಜಾರಕಿಹೊಳಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ಆ ಭೇಟಿ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಸತೀಶ್ ಬಳಿ ಕೊಟ್ಟ ಮಾತಿನ ಬಗ್ಗೆ ಡಿಕೆಶಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿತ್ತು. ಸದ್ಯ ಎಲ್ಲವೂ ಶಾಂತವಾಗಿರುವಾಗಲೇ ಮತ್ತೊಮ್ಮೆ ಸಚಿವ ಸತೀಶ್ ಜಾರಕಿಹೊಳಿಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಖಾಸಗಿ ಸ್ಥಳದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಏನಾದರೂ ಚರ್ಚೆ ಆಯಿತೇ ಎಂಬ ಪ್ರಶ್ನೆಗೆ ಮದುವೆಯಲ್ಲಿ ಇಬ್ಬರು ಭೇಟಿಯಾಗಿದ್ದೆವು ಅಷ್ಟೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ನಡುವೆ ಶುಕ್ರವಾರ ಬೆಳಗ್ಗೆ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಸುಮಾರು 1 ಗಂಟೆ ಚರ್ಚೆ ನಡೆಸಿದ್ದಾರೆ. ಡಿಕೆ ಸುರೇಶ್ ಕೂಡಾ ಸಹೋದರ ಡಿ ಕೆ ಶಿವಕುಮಾರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಸದ್ಯ ರಾಜ್ಯ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಗುಸುಗುಸು ಹರಿದಾಡಲು ಕಾರಣವಾಗಿದೆ.
ಡಿಕೆಶಿ ಮನೆಗೆ ಪ್ರಿಯಾಂಕ್ ಖರ್ಗೆ: ಇತ್ತ ಇಂದು ಪ್ರಿಯಾಂಕ್ ಖರ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದಾರೆ. ಆದರೆ ಇಬ್ಬರು ನಾಯಕರ ನಡುವೆ ನಡೆದ ಚರ್ಚೆಯ ಬಗ್ಗೆ ಎಲ್ಲೂಅವರು ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ನಾಯಕರ ನಡೆ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕಳೆದ ಕೆಲ ತಿಂಗಳಿಂದ ನಡೆಯುತ್ತಿದ್ದ ಕುರ್ಚಿ ಕದನಕ್ಕೆ ತಾರ್ಕಿಕ ಅಂತ್ಯ ಬಿದ್ದಂತೆ ಕಾಣುತ್ತಿದೆ. ಇದೀಗ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಬಹಿರಂಗ ಹೇಳಿಕೆ ನಿಲ್ಲಿಸಿ.. ಅಧಿವೇಶನದಲ್ಲಿ ವಿಪಕ್ಷವನ್ನು ಎದುರಿಸಲು ಸಜ್ಜಾಗಿ ಎಂದು ಕರೆ ನೀಡಿದ್ದಾರೆ.