ಬೆಂಗಳೂರು : ಲೋಕೋಪಯೋಗಿ ಮಂತ್ರಿ, ಯಮಕನಮರಡಿ ಶಾಸಕ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಸತೀಶ್ ಜಾರಕಿಹೊಳಿ (Satish Jarkiholi) ದೆಹಲಿಗೆ ಹೋಗಲಿದ್ದಾರೆ. ಅದಕ್ಕೂ ಮುನ್ನವೇ ಸಚಿವ ಸತೀಶ್ ಜಾರಕಿಹೊಳಿಯವರನ್ನು ಮಾಜಿ ಸಚಿವ ಕೆ ಎನ್ ರಾಜಣ್ಣ (KN Rajanna) ಭೇಟಿ ಮಾಡಿದ್ದಾರೆ.
ಬೆಂಗಳೂರಿನಲ್ಲಿರೋ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಭೇಟಿ ಮಾಡಿದ ಕೆ.ಎನ್ ರಾಜಣ್ಣ, ಕೆಲ ಹೊತ್ತು ಮಾತುಕತೆ ನಡೆಸಿದರು. ಉಭಯ ನಾಯಕರ ಭೇಟಿ ಹಾಗೂ ಮಾತುಕತೆ ಕುತೂಹಲ ಕೆರಳಿಸಿದೆ. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆಯ ನಡುವೆ ಸತೀಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಭೇಟಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
‘ನನ್ನನ್ನು ಭೇಟಿ ಮಾಡೋಕೆ ಹಲವರು ಬರುತ್ತಾರೆ. ಪಕ್ಷದ ಶಾಸಕರು ಬರುವುದು ಸಹಜವಾಗಿದೆ. ಹಾಗಾಗಿ ಇದರಲ್ಲಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ‘ನಾನು ಖಾಸಗಿ ಕೆಲಸಕ್ಕಾಗಿ ದೆಹಲಿಗೆ ಹೋಗ್ತಿದ್ದೇನೆ. ಯಾವುದೇ ರಾಜಕೀಯ ಚರ್ಚೆಯ ಉದ್ದೇಶಕ್ಕಾಗಿ ಹೋಗುತ್ತಿಲ್ಲ. ದೆಹಲಿಯಲ್ಲಿ ಹೊಸ ಕಟ್ಟಡ ಮಾಡ್ತಿದ್ದೇವೆ. ಅದನ್ನು ನೊಡೋಕೆ ದೆಹಲಿಗೆ ಹೋಗ್ತಿದ್ದೇನೆ’ ಎಂದು ಹೇಳಿದರು.
‘ಯಾವಾಗ ಬದಲಾವಣೆ ಎಂಬುವುದು ಗೊತ್ತಿಲ್ಲ’
‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ ಅಷ್ಟೇ, ಆದರೆ ಯಾವಾಗ ಬದಲಾವಣೆ ಎಂಬುವುದು ಗೊತ್ತಿಲ್ಲ. ನಾಯಕತ್ವ ಬದಲಾವಣೆ ಚರ್ಚೆ ಇವತ್ತಿನಿಂದ ನಡೆಯುತ್ತಿಲ್ಲ. ಆದರೆ ಬದಲಾವಣೆ ನಾಳೆಯೂ ಇಲ್ಲ, ಮುಂದೆಯೂ ಇಲ್ಲ. ನಮ್ಮ ಹಂತದಲ್ಲಿ ಯಾವುದೂ ಆಗಲ್ಲ. ನಾಯಕತ್ವ ಬದಲಾವಣೆಯನ್ನು ಹೈಕಮಾಂಡ್ ನವರು ತೀರ್ಮಾನಿಸಬೇಕು’ ಎಂದು ಹೇಳಿದರು.
ಮಾರ್ಚ್ 31ರ ಭವಿಷ್ಯ ನುಡಿದ ಕೆ.ಎನ್.ರಾಜಣ್ಣ
ಕಾಂಗ್ರೆಸ್ನ ರೆಬೆಲ್ ಸ್ಟಾರ್ ಕೆ.ಎನ್ ರಾಜಣ್ಣ ಮತ್ತೆ ಬಂದಿದ್ದಾರೆ. ವಾಡಿಕೆಯಂತೆಯೇ ರಾಜಣ್ಣ ಹೊಸ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಆ ಭವಿಷ್ಯ ಕೇಳಿ ಡಿ.ಕೆ ಶಿವಕುಮಾರ್ ಆಪ್ತರು ಖುಷಿಯಾಗಿದ್ದಾರೆ. ಸಿಎಂ ಕುರ್ಚಿ ಕಾಳಗದ ಮಧ್ಯೆ ಮಾಜಿ ಸಚಿವ ಕೆ.ಎನ್ ರಾಜಣ್ಣ ಅಚ್ಚರಿ ಭವಿಷ್ಯ ನುಡಿದಿದ್ದಾರೆ.. ಬಜೆಟ್ ಮಂಡನೆ ಆಗೋವರೆಗೂ ನಾಯಕತ್ವ ಬದಲಾವಣೆ ಬಗ್ಗೆ ಮಾತ್ನಾಡ್ಬೇಡಿ ಎಂದು ಕೆ.ಎನ್ ರಾಜಣ್ಣ ಅಚ್ಚರಿ ಹೇಳಿಕೆ ನೀಡಿದ್ದಾರೆ. ಸಿಎಂ ಹೇಳಿದಂತೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ.. ಡಿಸಿಎಂ ಡಿಕೆಶಿ ಕೂಡ ವೈರಾಗ್ಯದ ಮಾತು ಹೇಳಿದ್ದಾರೆ.. ಯಾವಾಗ ಏನಾಗುತ್ತೆ ಎಂದು ಊಹಿಸಲು ಆಗಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದಾರೆ.
ನಾಲ್ಕೈದು ತಿಂಗಳ ಹಿಂದೆ ಕ್ರಾಂತಿಯ ಜನಕ ಕೆ.ಎನ್.ರಾಜಣ್ಣ ರಾಗ ಸಂಯೋಜಿಸಿದ್ದ ರಾಜಕೀಯ ವಿಪ್ಲವ. ಪರಿವರ್ತನೆಯ ಪರ್ವಕ್ಕೆ ಘಳಿಗೆ ಕೂಡಿ ಬರಲೇ ಇಲ್ಲ. ನವೆಂಬರ್ ಕಳೆಯಿತು, ಡಿಸೆಂಬರ್ ಕೂಡಾ ಹೋಯ್ತು. ಜನವರಿಯೂ ಬಂತು. ಡಿಕೆಶಿ ಅಂತೂ ಶುಭಮುಹೂರ್ತ ನೋಡಲು ಪಂಚಾಂಗ ಖರೀದಿಸಿ ಸುಸ್ತಾದ್ರು. ಕ್ರಾಂತಿ ಆಗ್ಲೇ ಇಲ್ಲ. ಉಳಿದಿದ್ದು ಬರೀ ಗೊಂದಲ. ಇದರ ಮಧ್ಯೆ ಅದೇ ರಾಜಣ್ಣ ಹೊಸ ಮುಹೂರ್ತ ಫಿಕ್ಸ್ ಮಾಡಿದ್ದಾರೆ.
ಇದನ್ನೂ ಓದಿ : ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವದಂತಿ – ನೋ ವೇ ಎಂದ ಸತೀಶ್ ಜಾರಕಿಹೊಳಿ!