ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯ ಜನರಲ್ ಸೆಕ್ರೆಟರಿ, ಹಿರಿಯ ಕಾಂಗ್ರೆಸ್ ಮುಖಂಡ ಮುಕುಲ್ ವಾಸ್ನಿಕ್ ಅವರು 42 ಅಭ್ಯರ್ಥಿ ಹೆಸರು ಇರುವ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದ್ದಾರೆ. ಕಳೆದ ಮಾರ್ಚ್ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಬಾಕಿ ಇದ್ದ 100 ಕ್ಷೇತ್ರಗಳ ಪೈಕಿ 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು 58 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ. ಇನ್ನು ಈ ಎರಡನೇ ಪಟ್ಟಿಯಲ್ಲಿ ಇರುವ ಕೆಲ ಹೆಸರು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ, ಅಚ್ಚರಿ ಅಭ್ಯರ್ಥಿ ಯಾರು? ಈ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್ ನೀಡಲಾಗಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ಸಮುದಾಯವಾರು ಟಿಕೆಟ್
2ನೇ ಪಟ್ಟಿಯಲ್ಲಿ ಕರ್ನಾಟಕ ಪ್ರಬಲ ಸಮುದಾಯವಾಗಿರುವ ವೀರಶೈವ ಲಿಂಗಾಯತರಿಗೆ 11 ಟಿಕೆಟ್ ನೀಡಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ 10 ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಇನ್ನುಳಿದ ಕುರುಬ ಸಮುದಾಯಕ್ಕೆ-3, ಎಸ್‌ಸಿ-4, ಮುಸ್ಲಿಂ–3, ಈಡಿಗ1, ಮೊಗವೀರ-2, ರಜಪೂತ-1, ಮರಾಠ-1, ಎಸ್.ಟಿ-2, ರೆಡ್ಡಿ-1 ಹಾಗೂ ನಾಯ್ಡು ಸಮುದಾಯಕ್ಕೆ 1 ಟಿಕೆಟ್ ನೀಡಲಾಗಿದೆ.
ದತ್ತಾಗೆ ಕೈ ತಪ್ಪಿದ ಕಡೂರು ಟಿಕೆಟ್
ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅವರ ಬದಲು ಆನಂದ್ ಕೆ.ಎಸ್. ಅವರಿಗೆ ಹೈಕಮಾಂಡ್ ಮಣೆ ಹಾಕಿದ್ದು ಅಚ್ಚರಿಗೆ ಕಾರಣವಾಗಿದೆ. ಟಿಕೆಟ್ ಆಸೆ ಇಟ್ಟುಕೊಂಡು ಬಂದ ದತ್ತಾಗೆ ಭಾರೀ ನಿರಾಸೆಯಾಗಿದೆ.
ವಲಸಿಗರಿಗೆ ಮಣೆ
ಇನ್ನು ಈ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಹುತೇಕ ವಲಸಿಗರಿಗೆ ಮಣೆ ಹಾಕಿದೆ. ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ವಾಪಸ್ ಕಾಂಗ್ರೆಸ್ ಸೇರ್ಪಡೆಯಾಗಿರುವ ಬಾಬುರಾವ್ ಚಿಂಚನಸೂರು (ಗುರುಮಿಟ್ಕಲ್), ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದ ಎನ್.ವೈ ಗೋಪಾಲಕೃಷ್ಣ (ಮೊಣಕಾಲ್ಮೂರು). ಜೆಡಿಎಸ್‌ನಿಂದ ಬಂದಿರುವ ಗುಬ್ಬಿ ಶ್ರೀನಿವಾಸ್‌ಗೆ ಮಣೆ ಹಾಕಲಾಗಿದೆ.
ಕೋಲಾರ ಟಿಕೆಟ್ ಇನ್ನೂ ನಿಗೂಢ
ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಕಾದು ನೊಡುವ ತಂತ್ರ ಅನುಸರಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣಾದೊಂದಿಗೆ ಕೋಲಾರದಿಂದಲೂ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಈ ಬಾರಿಯೂ ಸಹ ಸಿದ್ದರಾಮಯ್ಯ ಅವರಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಕೋಲಾರಕ್ಕೆ 2ನೇ ಪಟ್ಟಿಯಲ್ಲೂ ಅಭ್ಯರ್ಥಿ ಘೋಷಣೆ ಮಾಡದೇ ನಿಗೂಢವಾಗಿ ಉಳಿಸಿದೆ.
ಹಾಲಿ ಶಾಸಕರಿರುವ ಕ್ಷೇತ್ರಗಳ ಟಿಕೆಟ್ ಬಾಕಿ
ಪಕ್ಷದ ಹಾಲಿ ಶಾಸಕರಿರುವ ಕೆಲ ಕ್ಷೇತ್ರಗಳಿಗೂ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡದೇ ಬಾಕಿ ಉಳಿಸಿಕೊಂಡಿದೆ. ರಾಯಚೂರು ಜಿಲ್ಲೆಯ ಲಿಂಗಸ್ಗೂರು, ಹರಿಹರ, ಕುಂದಗೋಳ ಟಿಕೆಟ್ ಘೋಷಣೆಯಾಗಿಲ್ಲ. ಹೀಗಾಗಿ ಹೊಸಬರಿಗೆ ಟಿಕಟ್ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಇದರಿಂದ ಕಾದು ನೊಡುವ ತಂತ್ರ ಅನುಸರಿಸಿದೆ.
ಸಿದ್ದರಾಮಯ್ಯ ಪರಾಭವಗೊಂಡಿದ್ದ ಕ್ಷೇತ್ರದಲ್ಲಿ ಅಳೆದು ತೂಗಿ ಅಭ್ಯರ್ಥಿ
2018ರ ಚುನಾವಣೆಯಲ್ಲಿ ಸೋಲುಕಂಡಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಜೆಡಿಎಸ್‌ನಿಂದ ವಲಸೆ ಬಂದ ಮಾವನಹಳ್ಳಿ ಸಿದ್ದೇಗೌಡಗೆ ಚಾಮುಂಡೇಶ್ವರಿ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಅಭ್ಯರ್ಥಿ ಆಯ್ಕೆ ಕಗ್ಗಂಟು
ಮೈಸೂರು ನಗರದ ಚಾಮರಾಜ ವಿಧಾನಸಭಾ ಕ್ಷೇತ್ರ ಕೃಷ್ಣರಾಜ ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲೂ ಅಭ್ಯರ್ಥಿಗಳ ಘೋಷಣೆಯಾಗಿಲ್ಲ. ಎರಡು ಕಡೆ ಸಿದ್ದರಾಮಯ್ಯ ವರ್ಸಸ್ ಡಿ ಕೆ ಶಿವಕುಮಾರ್ ಎಂಬ ವಾತಾವರಣ ನಿರ್ಮಾಣವಾಗಿದೆ.