Wednesday, August 19, 2026
Homeಟಾಪ್ ನ್ಯೂಸ್KARNATAKA CABINET : ಸಚಿವ ಸಂಪುಟ ವಿಸ್ತರಣೆ : ಹೈಕಮಾಂಡ್ ಅಂಗಳದಲ್ಲಿಂದು ಹೈವೋಲ್ಟೇಜ್ ಸಭೆ

KARNATAKA CABINET : ಸಚಿವ ಸಂಪುಟ ವಿಸ್ತರಣೆ : ಹೈಕಮಾಂಡ್ ಅಂಗಳದಲ್ಲಿಂದು ಹೈವೋಲ್ಟೇಜ್ ಸಭೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ (Karnataka Politics) ಭಾರಿ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ (Cabinet Expansion) ಕಾಲ ಕೂಡಿಬಂದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಬರುವ ಸೋಮವಾರ ಅಂದರೆ ಜುಲೈ 20 ರಂದು ಹೊಸ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಬಲವಾದ ಸಾಧ್ಯತೆಗಳಿವೆ.

ಇಂದೇ ದೆಹಲಿಯಲ್ಲಿ ಹೈಕಮಾಂಡ್ ಮಹಾಸಭೆ

ಸಂಪುಟ ಕಸರತ್ತನ್ನು ಅಂತಿಮಗೊಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಬುಧವಾರ ರಾತ್ರಿಯೇ ತಮ್ಮದೇ ಆದ ಪ್ರತ್ಯೇಕ ಪಟ್ಟಿಗಳೊಂದಿಗೆ ದೆಹಲಿ ತಲುಪಿದ್ದಾರೆ.

ಗುರುವಾರ (ಇಂದು) ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಹೈವೋಲ್ಟೇಜ್ ಸಭೆ ನಡೆಯಲಿದೆ. ಡೆಹ್ರಾಡೂನ್ ಪ್ರವಾಸ ರದ್ದುಗೊಳಿಸಿರುವ ರಾಹುಲ್ ಗಾಂಧಿ ಅವರೂ ಈ ಸಭೆಯಲ್ಲಿ ಭಾಗವಹಿಸಿ ಅಂತಿಮ ಪಟ್ಟಿಗೆ ‘ಗ್ರೀನ್ ಸಿಗ್ನಲ್’ ನೀಡಲಿದ್ದಾರೆ ಎನ್ನಲಾಗುತ್ತಿದೆ. ದೆಹಲಿಗೆ ಹೊರಡುವ ಮುನ್ನ ‘ಕಾವೇರಿ’ ನಿವಾಸದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸುಮಾರು 40 ನಿಮಿಷಗಳ ಕಾಲ ಗೌಪ್ಯ ಮಾತುಕತೆ ನಡೆಸಿರುವುದು ಗಮನಾರ್ಹ.

20 ಸ್ಥಾನಗಳಿಗಾಗಿ ಹಳಬರು-ಹೊಸಬರ ಬಿಗ್ ಫೈಟ್!

ಸದ್ಯ ಸಂಪುಟದಲ್ಲಿ ಖಾಲಿ ಇರುವ ಒಟ್ಟು 20 ಸ್ಥಾನಗಳ ಭರ್ತಿಗಾಗಿ ಆಡಳಿತ ಪಕ್ಷದಲ್ಲಿ ತೀವ್ರ ಪೈಪೋಟಿ ಶುರುವಾಗಿದೆ. ಆಗಸ್ಟ್ 6 ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಅಷ್ಟರೊಳಗೆ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ತರಲು ಸಿಎಂ ಬಯಸಿದ್ದಾರೆ.

ಮೊದಲ ಹಂತದ 13 ಸಚಿವರ ಪಟ್ಟಿಯಲ್ಲಿ ಹಳಬರಿಗೇ ಮಣೆ ಹಾಕಿದ್ದಕ್ಕೆ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆಡಳಿತದಲ್ಲಿ ಕ್ರಿಯಾಶೀಲತೆಗಾಗಿ ಈ ಬಾರಿ ಹೊಸಬರಿಗೆ ಹೆಚ್ಚಿನ ಅವಕಾಶ ನೀಡುವಂತೆ ಅವರು ಸಲಹೆ ನೀಡಿದ್ದಾರೆ.

ಡಿ.ಕೆ.ಶಿ ವರ್ಸಸ್ ಸಿದ್ದರಾಮಯ್ಯ ಪಟ್ಟಿ

ಸಿಎಂ ಡಿ.ಕೆ. ಶಿವಕುಮಾರ್ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ. ಆದರೆ, ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಮತ್ತು ಹರಿಪ್ರಸಾದ್ ಅವರ ಜಂಟಿ ಪಟ್ಟಿಯಲ್ಲಿ ಯಾರ ಹೆಸರಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವು ಹಿರಿಯ ಸಚಿವರು ಮರಳಿ ಸ್ಥಾನ ಪಡೆಯಲು ಭಾರಿ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.

ಹೈಕಮಾಂಡ್ ಮುಂದಿರುವ ಸವಾಲುಗಳೇನು?

ಎಲ್ಲ 20 ಸ್ಥಾನಗಳನ್ನು ಒಮ್ಮೆಗೆ ತುಂಬಬೇಕೇ ಅಥವಾ 2-3 ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಬೇಕೇ ಎಂಬ ಗೊಂದಲ ಒಂದೆಡೆಯಾದರೆ; ಜಾತಿ, ಜಿಲ್ಲೆ ಹಾಗೂ ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ. ಹಳಬರ ಅನುಭವ ಹಾಗೂ ಹೊಸ ಶಾಸಕರ ಆಕಾಂಕ್ಷೆಗಳ ನಡುವೆ ಸಮತೋಲನ ಕಾಯ್ದುಕೊಂಡು ರಾಹುಲ್ ಗಾಂಧಿ ಅವರು ಇಂದು ಯಾರ ಯಾರ ಹೆಸರಿಗೆ ಅಂತಿಮ ಮುದ್ರೆ ಒತ್ತಲಿದ್ದಾರೆ ಎಂಬುದು ಸದ್ಯದ ಕುತೂಹಲ

ಇದನ್ನೂ ಓದಿ : ನಿಮ್ಮ ಮುಖದಲ್ಲಿ ಭಯ ಕಾಣುತ್ತಿದೆ: ಸಿಎಂ ಡಿಕೆಶಿಗೆ ಮಾತಲ್ಲೇ ತಿವಿದ ಕುಮಾರಣ್ಣ

ಹೆಚ್ಚಿನ ಸುದ್ದಿ

Change Language »
error: Content is protected !!