ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 3ರಿಂದ ಏಪ್ರಿಲ್ 12ರವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 29 ಶಾಖೆಗಳಲ್ಲಿ ಚುನಾವಣಾ ಬಾಂಡ್ಗಳು ಖರೀದಿಗೆ ಲಭ್ಯ ಇರಲಿವೆ.
ಕೇಂದ್ರ ಹಣಕಾಸು ಸಚಿವಾಲಯವು ಮಾರ್ಚ್ 31ರಂದು ‘ಎಲೆಕ್ಟೋರಲ್ ಬಾಂಡ್ ಸ್ಕೀಮ್ 2018’ ರ ಅಡಿಯಲ್ಲಿ ಚುನಾವಣಾ ಬಾಂಡ್ ಗಳ 26ನೇ ಕಂತಿನ ಘೋಷಣೆ ಮಾಡಿತ್ತು. ಇದರಂತೆ, ಭಾರತೀಯ ನಾಗರಿಕರು, ಉದ್ಯಮಿಗಳು ಬಾಂಡ್ಗಳನ್ನು ಖರೀದಿಸಬಹುದಾಗಿದ್ದು, ರಾಜಕೀಯ ಪಕ್ಷಗಳು ತೆರೆದಿರುವ ಎಲೆಕ್ಟೋರಲ್ ಬಾಂಡ್ ಖಾತೆಗಳ ಮೂಲಕ ದೇಣಿಗೆ ನೀಡಬಹುದಾಗಿದೆ. ಬಾಂಡ್ಗಳು ಇಶ್ಯೂ ಮಾಡಿದ 15 ದಿನಗಳ ಅವಧಿಗೆ ಮಾನ್ಯತೆ ಹೊಂದಿರುತ್ತವೆ. ಈ ಅವಧಿಯ ಒಳಗಾಗಿ ರಾಜಕೀಯ ಪಕ್ಷಗಳು ಅವುಗಳನ್ನು ಪಡೆಯಬೇಕಾಗಿದೆ.
ಈ ಹಿಂದಿನ ಮಾರಾಟದ ಅವಧಿಯಲ್ಲಿ, ಜನವರಿ ತಿಂಗಳಲ್ಲಿ ಎಸ್ಬಿಐ 308.76 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ಗಳ ಗುಚ್ಛವನ್ನು ಮಾರಾಟ ಮಾಡಿತ್ತು. 2018ರ ನಂತರ ಈ ವರೆಗೆ ಎಸ್ಬಿಐ 12,008.59 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ಗಳನ್ನು ಮಾರಾಟ ಮಾಡಿದೆ. ಈ ಪೈಕಿ 11,984.91 ಕೋಟಿ ರೂ. ಮೌಲ್ಯದ ಬಾಂಡ್ಗಳನ್ನು ರಾಜಕೀಯ ಪಕ್ಷಗಳು ರಿಡೀಮ್ ಮಾಡಿಕೊಂಡಿವೆ.
ಚುನಾವಣಾ ಬಾಂಡ್ ಅನ್ನು ಯಾರು, ಹೇಗೆ ಖರೀದಿಸಬಹುದು?
ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಲು ಬಯಸುವ ವ್ಯಕ್ತಿ ಅಥವಾ ಸಂಸ್ಥೆ/ಕಂಪನಿಗಳು ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದು. ಡಿಜಿಟಲ್ ಪಾವತಿ ಅಥವಾ ಚೆಕ್ ನೀಡಿ ಚುನಾವಣಾ ಬಾಂಡ್ಗಳನ್ನು ಖರೀದಿಸಬೇಕು. ನಗದು ನೀಡಿ ಖರೀದಿಸಲು ಅವಕಾಶವಿಲ್ಲ. 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 29ಎ ಅಡಿಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷ ಮಾತ್ರ ಚುನಾವಣಾ ಬಾಂಡ್ಗಳನ್ನು ಸ್ವೀಕರಿಸಲು ಅವಕಾಶವಿದೆ.