ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಅಸಮಾಧಾನಗಳು ಭುಗಿಲೆದ್ದಿವೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಎಂಎಲ್‌ಸಿ ರಘು ಆಚಾರ್‌ಗೆ ಭಾರೀ ನಿರಾಸೆಯಾಗಿದ್ದು, ಪಕ್ಷದ ವಿರುದ್ಧವೇ ರೆಬೆಲ್ ಆಗುವ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ನನ್ನನ್ನು ನಂಬಿಸಿ ಡು ನೀರಲ್ಲಿ ಕೈ ಬಿಟ್ಟಿದೆ. ಅಸೆಂಬ್ಲಿ ಚುನಾವಣೆಗೋಸ್ಕರ ಕೌನ್ಸಿಲ್ ಚುನಾವಣೆ ಬಿಟ್ಟುಕೊಟ್ಟಿದ್ದೆ. ಕಾಂಗ್ರೆಸ್ ವಿರುದ್ಧ ನನ್ನ ಸಮುದಾಯದವರು ಮತ ಹಾಕದಂತೆ ರಾಜ್ಯಾದ್ಯಂತ ಪ್ರಚಾರ ಮಾಡುತ್ತೇನೆ. ಆಂಜನೇಯ ಅವರನ್ನು ಬಿಟ್ಟು ಉಳಿದವರು ನಮ್ಮ ಜಿಲ್ಲೆಯಲ್ಲಿ ಸೋಲುತ್ತಾರೆ, ನಾನಂತೂ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ರಘು ಆಚಾರ್ ಸವಾಲು ಹಾಕಿದ್ದಾರೆ.
ಈ ನಡುವೆ, ರಘು ಆಚಾರ್ ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆಚಾರ್ ಮನವೊಲಿಕೆಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ನೇತೃತ್ವದ ನಿಯೋಗ ರಘು ಆಚಾರ್ ಮನೆಗೆ ಧಾವಿಸಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಾತುಕತೆ ನಡೆಸಿತು. ಆದರೆ, ಮನವೊಲಿಕೆ ಯತ್ನ ವಿಫಲಗೊಂಡಿದ್ದರಿಂದ ಕಾಂಗ್ರೆಸ್ ನಿಯೋಗ ನಿರಾಸೆಯಿಂದ ಹಿಂದಿರುಗಿದೆ.