ರಾಜ್ಯ ಸರ್ಕಾರ (State Govt) ಇತ್ತೀಚೆಗೆ ಜಾರಿಗೆ ತಂದಿರುವ ‘ಆಲ್ಕೋಹಾಲ್ ಇನ್ ಬಿವರೇಜ್’ (AIB) ಎಂಬ ವಿಶಿಷ್ಟ ತೆರಿಗೆ ವ್ಯವಸ್ಥೆಯು ಅಬಕಾರಿ ಇಲಾಖೆಯ ಆದಾಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಮದ್ಯದಲ್ಲಿರುವ ಆಲ್ಕೋಹಾಲ್ (Liquor) ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸುವ ಈ ಪದ್ಧತಿಯು ಕೇವಲ ಸರ್ಕಾರದ ಖಜಾನೆಯನ್ನು ತುಂಬಿಸುತ್ತಿಲ್ಲ, ಬದಲಿಗೆ ಕನ್ನಡಿಗರ ಕುಡಿಯುವ ಅಭ್ಯಾಸವನ್ನೇ ಬದಲಾಯಿಸುತ್ತಿದೆ.
ಮಾರುಕಟ್ಟೆಯಲ್ಲಿ ಹೆಚ್ಚು ಕಿಕ್ ಕೊಡುವ ಹಾರ್ಡ್ ಲಿಕ್ಕರ್ (ವಿಸ್ಕಿ, ರಮ್) ಹವಾ ಕಮ್ಮಿಯಾಗುತ್ತಿದ್ದು, ಲಘು ಪ್ರಮಾಣದ ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಬಿಯರ್‌ಗಳ ಮಾರಾಟ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದೆ. ಶೇ 5 ಕ್ಕಿಂತ ಕಡಿಮೆ ಆಲ್ಕೋಹಾಲ್ ಇರುವ ಪ್ರೀಮಿಯಂ ಲಾಗರ್ ಬಿಯರ್‌ಗಳ ದರ ಗಣನೀಯವಾಗಿ ತಗ್ಗಿರುವುದೇ ಈ ದೊಡ್ಡ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.
ಖಜನೆ ತುಂಬಿಸಿದ ಮದ್ಯಪ್ರಿಯರು: ಒಂದೇ ತ್ರೈಮಾಸಿಕದಲ್ಲಿ 10,599 ಕೋಟಿ ರೂ. ರಾಜಸ್ವ ಸಂಗ್ರಹ ಅಬಕಾರಿ ಇಲಾಖೆ ಬಿಡುಗಡೆ ಮಾಡಿರುವ ಹೊಸ ಲೆಕ್ಕಾಚಾರದ ಪ್ರಕಾರ, ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ಮೂರು ತಿಂಗಳಲ್ಲೇ ಬಿಯರ್ ಮಾರಾಟದಿಂದ ಸರ್ಕಾರಕ್ಕೆ ಬರೋಬ್ಬರಿ 1,914.81 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಬರೋಬ್ಬರಿ 312.67 ಕೋಟಿ ರೂಪಾಯಿ ಹೆಚ್ಚುವರಿ ಲಾಭ ಸಿಕ್ಕಂತಾಗಿದೆ.
ಕೇವಲ ಬಿಯರ್ ಮಾತ್ರವಲ್ಲದೆ ಭಾರತೀಯ ಮದ್ಯದ (IML) ಮಾರಾಟವೂ ಚುರುಕಾಗಿದ್ದು, ಈ ಬಾರಿ ದಾಖಲೆಯ 8,394.32 ಕೋಟಿ ರೂಪಾಯಿ ಹರಿದುಬಂದಿದೆ. ಒಟ್ಟಾರೆಯಾಗಿ ಅಬಕಾರಿ ಇಲಾಖೆಯು ಕಳೆದ ವರ್ಷಕ್ಕಿಂತ ಶೇ 14.39 ರಷ್ಟು ಭರ್ಜರಿ ಬೆಳವಣಿಗೆಯನ್ನು ಸಾಧಿಸುವ ಮೂಲಕ ಕೇವಲ ಮೂರೇ ತಿಂಗಳಲ್ಲಿ ಒಟ್ಟು 10,599.29 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದೆ.
ಕಿಂಗ್‌ಫಿಷರ್ ಬೆಲೆ ಅರ್ಧಕ್ಕರ್ಧ ಕಡಿತ: ಮುಗಿಬಿದ್ದ ಗ್ರಾಹಕರು
ಸರ್ಕಾರದ ಹೊಸ ತೆರಿಗೆ ಸೂತ್ರದಿಂದಾಗಿ ಪ್ರೀಮಿಯಂ ಬಿಯರ್‌ಗಳ ಬೆಲೆ ಮಾರುಕಟ್ಟೆಯಲ್ಲಿ ಪಾತಾಳಕ್ಕೆ ಇಳಿದಿದೆ. ಯುನೈಟೆಡ್ ಬ್ರೂವರೀಸ್‌ನ ಕಿಂಗ್‌ಫಿಷರ್ ಪ್ರೀಮಿಯಂನ 330 ಎಂಎಲ್ ಬಾಟಲಿ ಬೆಲೆ ಈ ಹಿಂದೆ 125 ರೂಪಾಯಿ ಇತ್ತು, ಆದರೀಗ ಅದು ಕೇವಲ 60 ರೂಪಾಯಿಗೆ ಸಿಗುತ್ತಿದೆ. ದರ ಅರ್ಧದಷ್ಟು ಕಮ್ಮಿಯಾಗುತ್ತಿದ್ದಂತೆಯೇ ಕಿಂಗ್‌ಫಿಷರ್ ಸೇರಿದಂತೆ ಬಡ್‌ವೈಸರ್, ಕೊರೊನಾ ಹಾಗೂ ಬೆಂಗಳೂರಿನ ಸ್ಥಳೀಯ ಬ್ರ್ಯಾಂಡ್ ಆದ ‘ಟೋಯ್ಟ್’ ಬಿಯರ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಬೇಸಿಗೆಯ ಸುಡುಬಿಸಿಲಿನ ಹೊತ್ತಲ್ಲೇ ಬೆಲೆ ಇಳಿಕೆಯಾಗಿದ್ದರಿಂದ ಕಳೆದ ಒಂದೂವರೆ ತಿಂಗಳಲ್ಲಿ ಬಿಯರ್ ದಾಸ್ತಾನು ಶೇ 25-30 ರಷ್ಟು ಸಲೀಸಾಗಿ ಖಾಲಿಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಗ್ರಾಹಕರು ಹೆಚ್ಚು ಆಲ್ಕೋಹಾಲ್ ಇರುವ ಪಾನೀಯಗಳ ಬದಲಿಗೆ ಲಘು ಪಾನೀಯಗಳನ್ನು ಇಷ್ಟಪಡುವಂತೆ ಮಾಡುವುದೇ ಹೊಸ ನೀತಿಯ ಮುಖ್ಯ ಉದ್ದೇಶ ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
45 ಸಾವಿರ ಕೋಟಿಯ ಬೃಹತ್ ಟಾರ್ಗೆಟ್: 579 ಬಾರ್ ಲೈಸೆನ್ಸ್ ಆನ್‌ಲೈನ್ ಹರಾಜು
ಪ್ರಸಕ್ತ ಆರ್ಥಿಕ ವರ್ಷಕ್ಕೆ ಒಟ್ಟು 45,000 ಕೋಟಿ ರೂಪಾಯಿ ಅಬಕಾರಿ ಆದಾಯದ ಬೃಹತ್ ಗುರಿಯನ್ನು ಹೊಂದಿರುವ ಸರ್ಕಾರ, ಇದನ್ನು ತಲುಪಲು ಹೊಸ ಪ್ಲ್ಯಾನ್ ಮಾಡಿದೆ. ಐಎಂಎಲ್ ತಯಾರಕರು ಮದ್ಯದಲ್ಲಿ ಕನಿಷ್ಠ ಶೇ 40 ರಷ್ಟು ಆಲ್ಕೋಹಾಲ್ ಇಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದರ ಬೆನ್ನಲ್ಲೇ, ಸದ್ಯ ಬಳಕೆಯಾಗದೆ ರದ್ದಾಗಿ ಉಳಿದಿರುವ 483 ಚಿಲ್ಲರೆ ಮದ್ಯದ ಅಂಗಡಿ (CL-2A) ಮತ್ತು 96 ಬಾರ್ (CL-9A) ಪರವಾನಗಿಗಳನ್ನು ಇದೇ ತಿಂಗಳ ಕೊನೆಯಲ್ಲಿ ಆನ್‌ಲೈನ್ ಹರಾಜು ಮೂಲಕ ವಿಲೇವಾರಿ ಮಾಡಲು ಇಲಾಖೆ ನಿರ್ಧರಿಸಿದೆ. ಈ ಹೊಸ ಲೈಸೆನ್ಸ್‌ಗಳನ್ನು ಮುಂದಿನ ಐದು ವರ್ಷಗಳ ಅವಧಿಗೆ ನೀಡಲಾಗುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಕೋಟಿ ಕೋಟಿ ಹಣ ಹರಿದುಬರಲಿದೆ.