ಬೆಂಗಳೂರು : ರಾಜ್ಯದಲ್ಲಿ ಹಾಲು-ಮೊಸರು ಮಾರಾಟಕ್ಕೆ ಮುಂದಾಗಿರುವ ಗುಜರಾತ್ ಮೂಲದ ಅಮುಲ್ ಸಂಸ್ಥೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಅಮುಲ್ ಓಡಿಸಿ ನಂದಿನಿ ಉಳಿಸಿ ಎಂದು ಘೋಷಣೆ ಕೂಗಿದ ಕರವೇ ಕಾರ್ಯಕರ್ತರು ಅಮುಲ್ ಉತ್ಪನ್ನಗಳನ್ನು ರಸ್ತೆಗೆ ಸುರಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಅಮುಲ್ ಸಂಸ್ಥೆ ಯಾವ ಕಾರಣಕ್ಕೂ ತನ್ನ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಬಾರದು. ಒಂದು ವೇಳೆ ಕನ್ನಡಿಗರ ವಿರೋಧವನ್ನು ಲೆಕ್ಕಿಸದೆ ಮಾರಾಟಕ್ಕೆ ಮುಂದಾದರೆ ಅಮುಲ್ ಸಂಸ್ಥೆಯ ಎಲ್ಲಾ ಉತ್ಪನ್ನಗಳ ಮಾರಾಟಕ್ಕೂ ಅಡ್ಡಿಪಡಿಸಲಾಗುವುದು ಎಂದು ಕರವೇ ಸದಸ್ಯರು ಎಚ್ಚರಿಕೆ ನೀಡಿದರು.
ಸಹಕಾರಿ ಸಂಸ್ಥೆಗಳ ವಿಲೀನದ ಹೆಸರಿನಲ್ಲಿ ಅಮೂಲ್ ಜೊತೆಗೆ ನಂದಿನಿಯನ್ನು ಸೇರ್ಪಡೆಗೊಳಿಸುವ ಸಂಚು ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ ಎಂದು ಆರೋಪಿಸಿದ ಕರವೇ ಸದಸ್ಯರು, ಯಾವ ಕಾರಣಕ್ಕೂ ನಮ್ಮ ಹೆಮ್ಮೆಯ ಸಂಸ್ಥೆಯಾದ ನಂದಿನಿಯನ್ನು ಹಾಳುಗೆಡವಲು ಬಿಡುವುದಿಲ್ಲ ಎಂದ ಕರವೇ ಕಾರ್ಯಕರ್ತರು, ಅಮೂಲ್ ತನ್ನ ನಿಲುವು ಬದಲಿಸದಿದ್ದರೆ ಚಳವಳಿ ಯಾವ ಸ್ವರೂಪಕ್ಕಾದರೂ ತಿರುಗವಹುದು ಎಂದಿದ್ದಾರೆ.