ಮಂಡ್ಯ: ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಪ್ರಸಿದ್ಧ ಆಹಾರ ಬಾಡೂಟ ಕೊಡಬೇಕು ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ. ಬಾಡೂಟ ನೀಡದಿದ್ದರೆ ನಾವೇ ಅದರ ವ್ಯವಸ್ಥೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದು, ಸಮ್ಮೇಳನಕ್ಕೆ ಬರುವವರಿಗೆ ಬಾಡೂಟ ಬಡಿಸಲು ‘ಮನೆಗೊಂದು ಕೋಳಿ, ಊರಿಗೊಂದು ಕುರಿ’ ಸಂಗ್ರಹ ಅಭಿಯಾನಕ್ಕೆ ಸಂಘಟನೆಯೊಂದು ಮುಂದಾಗಿದೆ.
ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22 ರವರೆಗೆ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಲು ಹಲವರು ಮೊಟ್ಟೆ, ಕೋಳಿ ಮತ್ತು ಹಣ ಸಹಾಯ ನೀಡಲು ಮುಂದೆ ಬಂದಿರುವುದರಿಂದ, ಅವುಗಳನ್ನು ಇಂದಿನಿಂದ ಸಂಗ್ರಹಿಸಲು ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮುಂದಾಗಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರಿ ಊಟದ ಜತೆಗೆ ಮಾಂಸದೂಟ ಹಾಕುವ ಮೂಲಕ ಆಹಾರ ಸಮಾನತೆಯನ್ನು ಎತ್ತಿಹಿಡಿಯುವ ಪ್ರಗತಿಪರ ಸಂಘಟನೆಗಳ ಬೇಡಿಕೆಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಸ್ವಾಗತ ಸಮಿತಿ ಇಲ್ಲಿಯವರೆಗೆ ಖಚಿತ ಅಭಿಪ್ರಾಯ ವ್ಯಕ್ತಪಡಿಸಿಲ್ಲ.