Saturday, January 25, 2025
Homeಟಾಪ್ ನ್ಯೂಸ್ಸಿಆರ್‌ಪಿಎಫ್‌ ಪರೀಕ್ಷೆಅಲ್ಲಿ ಕನ್ನಡ ನಿರ್ಲಕ್ಷ್ಯ: ಹೆಚ್‌ಡಿಕೆ, ಸಿದ್ದು ಗರಂ

ಸಿಆರ್‌ಪಿಎಫ್‌ ಪರೀಕ್ಷೆಅಲ್ಲಿ ಕನ್ನಡ ನಿರ್ಲಕ್ಷ್ಯ: ಹೆಚ್‌ಡಿಕೆ, ಸಿದ್ದು ಗರಂ

ಕೇಂದ್ರ ಮೀಸಲು ಪಡೆ (ಸಿಆರ್‌ಪಿಎಫ್‌) ನೇಮಕಾತಿಗೆ ನಡೆಸಲಾದ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸದಿರುವ ಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಿಜೆಪಿ ಸರಕಾರ ಮತ್ತೆ ಕನ್ನಡಿಗರಿಗೆ ಉಂಡೆನಾಮ ಹಾಕಿದೆ. ಸಿಆರ್‌ಪಿಎಫ್‌ ನೇಮಕಾತಿಗೆ ನಡೆಸಿದ ಕಂಪ್ಯೂಟರ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಷ್ಟೇ ಪರೀಕ್ಷೆಗೆ ಅವಕಾಶ ನೀಡಿರುವುದು ಖಂಡನೀಯ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಒಟ್ಟು 9212 ಹುದ್ದೆಗಳಿಗೆ ನಡೆದ ಈ ಪರೀಕ್ಷೆಯಲ್ಲಿ ಕರ್ನಾಟಕದ 466 ಹುದ್ದೆಗಳೂ ಸೇರಿವೆ. ಅಭ್ಯರ್ಥಿಗಳು ಹಿಂದಿ, ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆಯುವ ಅನಿವಾರ್ಯ ಸೃಷ್ಟಿಸಲಾಗಿದೆ. ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ನಿರಾಕರಿಸುವುದು ಎಂದರೆ ಸಂವಿಧಾನಕ್ಕೆ ಎಸಗಿದ ಅಪಚಾರ.

ಕೇಂದ್ರ ನಡೆಸುವ ಎಲ್ಲ ನೇಮಕಾತಿ ಪರೀಕ್ಷೆ ಹಿಂದಿ, ಇಂಗ್ಲಿಷ್ ನಲ್ಲೇ ನಡೆಸುತ್ತಿದೆ. ಇತರೆ ಭಾಷಿಕರನ್ನು ಉದ್ಯೋಗ ವಂಚಿತರನ್ನಾಗಿಸುವುದು ಮಾತ್ರವಲ್ಲ, ಅನ್ಯ ಭಾಷೆಗಳನ್ನು ಹತ್ತಿಕ್ಕಿ ಹಿಂದಿ ಹೇರಿಕೆ ಮಾಡುವುದಷ್ಟೇ ದುರುದ್ದೇಶ. ಈ ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳನ್ನು ಹಿಂದಿ ಭಾಷೆಗೆ ಸಂಬಂಧಿಸಿದವು. ಹಿಂದಿಯೇತರ ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಆಯ್ಕೆ ಆಗಬಾರದೆಂದು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆ.

ಸಿಆರ್ ಪಿಎಫ್ ಮರು ಪರೀಕ್ಷೆ ನಡೆಸಬೇಕು ಹಾಗೂ ಕನ್ನಡ ಸೇರಿ ದೇಶದ ಎಲ್ಲ ಭಾಷೆಗಳಲ್ಲೂ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಇಲ್ಲವಾದರೆ, ಈ ತಾರತಮ್ಯ ಹಾಗೂ ಹಿಂದಿ ಹೇರಿಕೆ ಇನ್ನೊಂದು ದೊಡ್ಡ ಹೋರಾಟಕ್ಕೆ ನಾಂದಿ ಆದೀತು ಎಂದು ಅವರು ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯ ಭಾಷೆಗಳನ್ನು ಮೂಲೆಗೆ ತಳ್ಳಿ ಹಿಂದಿ ಭಾಷೆಯನ್ನು ನಮ್ಮ ತಲೆ ಮೇಲೆ ಹೇರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಉದ್ಯಮ, ಉದ್ಯೋಗ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಿಂದಿ ಭಾಷೆಯ ಯಜಮಾನಿಕೆ ಹೆಚ್ಚಾಗುತ್ತಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮಧ್ಯೆ ಪ್ರವೇಶಿಸಿ ಸಿಆರ್‌ಪಿಎಫ್ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ರಾಜ್ಯ ಭಾಷೆಗಳಲ್ಲಿ ಬರೆಯಲು ಅನುಕೂಲ ಮಾಡಿಕೊಡಬೇಕು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತು ಬಿಜೆಪಿ ಸಂಸದರು ಇದಕ್ಕಾಗಿ ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕು.” ಎಂದು ಆಗ್ರಹಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!