ವಿವಾದಗಳಿಗಾಗಿಯೇ ಹೆಸರಾಗಿರುವ ನಟ ಚೇತನ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಸಂಘಪರಿವಾರ ಹಾಗೂ ಹಿಂದುತ್ವದ ವಿರುದ್ಧ ಟ್ವೀಟ್ ಮಾಡಿದ ಆರೋಪದ ಮೇಲೆ ಶೇಷಾದ್ರಿಪುರಂ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ದಾಖಲಾಗಿದ್ದು, ದೂರಿನ ಆಧಾರದಲ್ಲಿ ಚೇತನ್ ಅವರು ಮತ್ತೊಮ್ಮೆ ಅರೆಸ್ಟ್ ಆಗಿದ್ದಾರೆ.
ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್ ಹೇಳಿಕೆಯೂ ಸುಳ್ಳು ಎಂದು ಬರೆದಿರುವ ಚೇತನ್ ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ‘ರಾಷ್ಟ್ರ’ ಪ್ರಾರಂಭವಾಯಿತು ಎಂಬುದೂ ಸುಳ್ಳು. ಬಾಬರಿ ಮಸೀದಿ ‘ರಾಮನ ಜನ್ಮಭೂಮಿ’’ ಎಂಬ ವಾದವೂ ಒಂದು ಸುಳ್ಳು. ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ‘ಕೊಂದರು’ ಎಂಬುದು ಕೂಡ ಒಂದು ಸುಳ್ಳು ಎಂದು ಪೋಸ್ಟ್ ಮಾಡಿದ್ದಾರೆ.
ಶೇಷಾದ್ರಿಪುರಂ ಪೊಲೀಸರು ಚೇತನ್ ಅವರನ್ನು ಬಂಧಿಸಿದ್ದು ಹಿಂದು ಮತ್ತು ಹಿಂದುತ್ವದ ಬಗ್ಗೆ ಹಾಕಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ವಿರುದ್ಧ ಬಜರಂಗದಳದ ಶಿವಕುಮಾರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಪಡೆಯಲಾಗಿದೆ. ಸೆಕ್ಷನ್ 295(ಎ), 505 ಬಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಚೇತನ್‌ರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.