ಬೆಂಗಳೂರರು: ಗಾಲಿ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣಕ್ಕೆ ಮರಳಿ ಹೊಸ ಪಕ್ಷ ಸ್ಥಾಪಿಸಿ ಹಲವು ದಿನಗಳೇ ಕಳೆದಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಮರು ಎಂಟ್ರಿ ಪಡೆದಿರುವ ಜನಾರ್ದನ ರೆಡ್ಡಿ ಪಕ್ಷಕ್ಕೆ ಫುಟ್‌ಬಾಲ್ ಚಿನ್ಹೆ ದೊರೆತಿದೆ
ಇಂದು ತಮ್ಮ ಬೆಂಗಳೂರಿನ ನಿವಾಸದಲ್ಲಿ ಪಕ್ಷದ ಚಿನ್ಹೆ ಹಾಗೂ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ, ಜನರು ನನ್ನ ನಿರೀಕ್ಷೆಗೂ ಮೀರಿ ವಿಶ್ವಾಸ ತೋರುತ್ತಿದ್ದಾರೆ. ಈಗಾಗಲೇ ನಮ್ಮ ಪಕ್ಷದಿಂದ 12 ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ. ಮುಂದಿನ ವಾರದೊಳಗಾಗಿ ಇನ್ನೂ 19 ಅಭ್ಯರ್ಥಿಗಳ ಹೆಸರು ಘೋಷಿಸುತ್ತೇವೆ. ನಾವು ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದ್ರು.
ಒಂದು ಕಾಲದಲ್ಲಿ ರಾಜ್ಯ ರಾಜಕಾರಣದ ಬಹುಮುಖ್ಯ ಅಂಗವಾಗಿದ್ದ ರೆಡ್ಡಿಯವರನ್ನು ಬಿಜೆಪಿ ನಡೆಸಿಕೊಂಡ ರೀತಿಯಿಂದ ಬೇಸತ್ತ ಇವರು ಹೊಸ ಪಕ್ಷ ಸ್ಥಾಪಿಸಿ ಎಲ್ಲರಿಗೂ ಉತ್ತರ ಕೊಡಲು ಸಜ್ಜಾಗಿದ್ದಾರೆ. ಇದೀಗ ರಾಜ್ಯ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದೆ. ಜನಾರ್ದನ ರೆಡ್ಡಿ ರಾಜಕೀಯ ಅದೃಷ್ಟ ಪರೀಕ್ಷೆಗಿಳಿದಿದ್ದು ಚುನಾವಣೆ ಮುಖಾಂತರ ರಾಜಕೀಯ ಜೀವನದ ಹೊಸ ಪರ್ವ ಆರಂಭಿಸಿದ್ದಾರೆ.