ಬೆಂಗಳೂರು: ಕಲಬುರಗಿಯ (Kalaburagi) ಆಳಂದ್‌ನ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿರುವ ನಿರ್ಧಾರದ ವಿರುದ್ಧ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಿಯೋಗವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಅಧಿಕೃತವಾಗಿ ದೂರು ಸಲ್ಲಿಸಿದೆ. ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ಗಂಭೀರ ಗಲಾಟೆ ಪ್ರಕರಣ ಸೇರಿದಂತೆ ಹಲವು ಕೇಸ್‌ಗಳನ್ನು ವಾಪಸ್ ಪಡೆಯಲು ತೀರ್ಮಾನಿಸಿರುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ.
ಕ್ರಿಮಿನಲ್ ಪ್ರಕರಣ ಹಿಂಪಡೆಯದಂತೆ ಮನವಿ
ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗವು, ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣ ಅತ್ಯಂತ ಸೂಕ್ಷ್ಮ ಹಾಗೂ ಕ್ರಿಮಿನಲ್ ಸ್ವರೂಪದ್ದಾಗಿದೆ ಎಂದು ವಿವರಿಸಿತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಇಂತಹ ಗಂಭೀರ ಪ್ರಕರಣಗಳನ್ನು ರಾಜಕೀಯ ಪ್ರೇರಿತವಾಗಿ ಹಿಂಪಡೆಯುವುದು ಸರಿಯಲ್ಲ. ಹಾಗಾಗಿ, ಈ ಘಟನೆಗೆ ಕಾರಣರಾದ ಕಿಡಿಗೇಡಿಗಳ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಮತ್ತು ಗಲಭೆಗೆ ಕಾರಣರಾದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ನಿಯೋಗವು ರಾಜ್ಯಪಾಲರಿಗೆ ಮನವಿ ಮಾಡಿದೆ.
ಓಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್‌ನಿಂದ ತಂತ್ರ
ದೂರಿನ ಬಳಿಕ ಮಾಧ್ಯಮಗಳೊಂದಿಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ರಾಜ್ಯಪಾಲರನ್ನ ಭೇಟಿ ಮಾಡಿದ್ದೇವೆ. ಆಳಂದ ದರ್ಗಾದಲ್ಲಿ ಈ ಹಿಂದೆ ಗಲಾಟೆ ನಡೆದಿತ್ತು. ಲಾಡ್ಲೆ ಮಷಾಕ್ ದರ್ಗಾದಲ್ಲಿ ಹಲವು ವರ್ಷಗಳಿಂದ ಶಿವಲಿಂಗದ ಇದೆ. ಇದಕ್ಕಾಗಿ ಅನೇಕರ ಹತ್ಯೆಗಳು ನಡೆದಿದೆ. ಕೆಲವರು ಶಿವಲಿಂಗದ ಮೇಲೆ ಮಲ, ಮೂತ್ರ ಮಾಡಿದ್ರು. ಅದನ್ನ ಸ್ವಚ್ಛಗೊಳಿಸಲು ಹೋದ ಸಂದರ್ಭದಲ್ಲಿ ಮಚ್ಚು, ಲಾಂಗಿನಿಂದ ಹಲ್ಲೆಮಾಡಿದ್ರು. ಈ ವೇಳೆ ಬಂದ ಪೊಲೀಸರು, ಡಿಸಿ ಮೇಲೆಯೂ ಹಲ್ಲೆ ನಡೆಸಿದ್ದರು. ಇದೆಲ್ಲಾ ಇದ್ರೂ, ಕೋರ್ಟ್‌ನಲ್ಲಿ ಕೇಸ್ ಇದ್ರೂ. ವೋಟ್ ಬ್ಯಾಂಕಿಗಾಗಿ ಸ್ಪೀಕರ್ ಮೂಲಕ ಪತ್ರ ಕೊಡಿಸಿ ಕೇಸ್ ಹಿಂಪಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇಸ್ ಹಿಂಪಡೆಯುವ ಮೂಲಕ ಯಾರು ತಪ್ಪು ಮಾಡಿದ್ದಾರೆ, ಕ್ರಿಮಿನಲ್ ಆಕ್ಟಿವಿಟಿ ಮಾಡಿರೋರಿಗೆ ಶಿಕ್ಷೆ ತಪ್ಪಿಸೋ ಕೆಲಸ ಮಾಡಿದ್ದಾರೆ. ಇದು ಹಿಂದುತ್ವಕ್ಕೆ, ಹಿಂದೂಗಳಿಗೆ ಮಾಡಿರೋ ಅಪಮಾನ. ವೋಟ್ ಬ್ಯಾಂಕಿಗೆ ಓಲೈಕೆ ಮಾಡಲು ಈ ರೀತಿ ಕೇಸ್ ವಾಪಸ್ ಪಡೆದಿದ್ದಾರೆ. ದಲಿತ, ಕನ್ನಡ ಸಂಘಟನೆ ಹೋರಾಟ ಮಾಡಿದವರನ್ನ ಜೈಲಿಗೆ ಕಳಿಸಿದ್ರು. ಬಾಂಬ್ ಹಾಕಿದವರನ್ನ, ತಲವಾರ್‌ನಿಂದ ಹಲ್ಲೆ ಮಾಡಿದವರನ್ನ ಓಲೈಕೆ ಮಾಡ್ತಾರೆ. ಈ ರೀತಿ ಕೇಸ್ ವಾಪಸ್ ಪಡೆದಿರೋದನ್ನ ರೀ-ಓಪನ್ ಮಾಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ
ಏನಿದು ಲಾಡ್ಲೆ ಮಷಾಕ್ ದರ್ಗ ಕೇಸ್?
ಈ ಸ್ಥಳವು 14ನೇ ಶತಮಾನದ ಪ್ರಸಿದ್ಧ ಸೂಫಿ ಸಂತ ಹಜರತ್ ಲಾಡ್ಲೆ ಮಶಾಕ್ ಅವರ ಹೆಸರಿನಲ್ಲಿದೆ. ಮುಸ್ಲಿಂ ಸಮುದಾಯದವರು ದಶಕಗಳಿಂದ ಇಲ್ಲಿ ಉರುಸ್ ಮತ್ತು ಧಾರ್ಮಿಕ ಪ್ರಾರ್ಥನೆಗಳನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ. ಹಿಂದೂ ಸಮುದಾಯ ಮತ್ತು ಸಂಘಟನೆಗಳ ಪ್ರಕಾರ, ಇದೇ ದರ್ಗಾದ ಆವರಣದಲ್ಲಿ 15ನೇ ಶತಮಾನದ ಹಿಂದೂ ಸಂತ, ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾದ ಸಮರ್ಥ ರಾಮದಾಸರ ಪರಂಪರೆಗೆ ಸೇರಿದ ಶ್ರೀ ರಾಘವ ಚೈತನ್ಯ ಅವರ ಸಮಾಧಿ ಹಾಗೂ ಶಿವಲಿಂಗವಿದೆ. ಹೀಗಾಗಿ ಹಿಂದೂಗಳು ಇದನ್ನು ಪವಿತ್ರ ಕ್ಷೇತ್ರವೆಂದು ನಂಬುತ್ತಾರೆ.
ಹಲವು ವರ್ಷಗಳಿಂದ ಈ ಜಾಗದ ಧಾರ್ಮಿಕ ಸ್ವರೂಪದ ಕುರಿತು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯುತ್ತಿತ್ತು. ಆದರೆ, 2022ರ ಬಳಿಕ ಮಹಾಶಿವರಾತ್ರಿಯ ದಿನದಂದು ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಹಿಂದೂಗಳು ಪೂಜೆ ಸಲ್ಲಿಸಬೇಕು ಮತ್ತು ಅದೇ ಸಂದರ್ಭದಲ್ಲಿ ಮುಸ್ಲಿಮರ ಉರುಸ್ ಆಚರಣೆಯೂ ಇರುತ್ತಿದ್ದರಿಂದ ಎರಡೂ ಕೋಮುಗಳ ನಡುವೆ ತೀವ್ರ ಘರ್ಷಣೆಗಳು ಉಂಟಾಗಿದ್ದವು. ಕಲ್ಲು ತೂರಾಟ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ನಡೆದು ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಈ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಹಲವು ಜನರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು
ಇದನ್ನೂ ಓದಿ: ಬಿಜೆಪಿ ನಾಯಕ ದಯಾನಂದ ರೆಡ್ಡಿ ಕಿಡ್ನಾಪ್ ಹೈಡ್ರಾಮಾ: ಗನ್ ಇಟ್ಟು ₹3 ಕೋಟಿಗೆ ಬೇಡಿಕೆ!