ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ವಿಧಾನಮಂಡಲದ ಜಂಟಿ ಅಧಿವೇಶನವನ್ನು (Session) ಫೆಬ್ರವರಿ 4ರವರೆಗೆ ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸೌಧದಲ್ಲಿ ಇಂದು ನಡೆದ ವಿಧಾನಸಭೆ ಕಾರ್ಯಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದೀಯ ವ್ಯವಹಾರ ಸಚಿವ ಹೆಚ್.ಕೆ. ಪಾಟೀಲ್, ವಿಪಕ್ಷ ನಾಯಕ ಆರ್. ಅಶೋಕ್, ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.
ಸಭೆಯಲ್ಲಿ ವಿಶೇಷ ವಿಧಾನಮಂಡಲದ ಜಂಟಿ ಅಧಿವೇಶನದ ಅವಧಿ ಕುರಿತು ಚರ್ಚೆ ನಡೆಸಲಾಗಿದ್ದು, ಮುಂದುವರಿದ ಚರ್ಚೆಗಳು ಮತ್ತು ಶಾಸನಾತ್ಮಕ ಕಾರ್ಯಗಳ ಹಿನ್ನೆಲೆಯಲ್ಲಿ ಅಧಿವೇಶನವನ್ನು ಫೆಬ್ರವರಿ 4ರವರೆಗೆ ವಿಸ್ತರಿಸುವ ನಿರ್ಧಾರಕ್ಕೆ ಒಮ್ಮತ ವ್ಯಕ್ತವಾಗಿದೆ.
ರಾಜ್ಯಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳು, ವಿಧೇಯಕಗಳು ಹಾಗೂ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನ ವಿಸ್ತರಣೆ ಅಗತ್ಯವಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ವಿಶೇಷ ಅಧಿವೇಶನ ವಿಸ್ತರಣೆಯಿಂದಾಗಿ ಮುಂದಿನ ದಿನಗಳಲ್ಲಿ ಆಡಳಿತ ಹಾಗೂ ರಾಜಕೀಯವಾಗಿ ಮಹತ್ವದ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.
ವಿಧಾನಸಭೆಯಲ್ಲಿ ಬಿಜೆಪಿ ಸಭಾತ್ಯಾಗ
ಇವತ್ತು ಯಾವ ಪೇಪರ್ ನೋಡಿದ್ರೂ ಕೂಡಾ ಸರ್ಕಾರಿ ಜಾಹೀರಾತು ಸದ್ದು ಮಾಡುತ್ತಿತ್ತು. ಅದೇ ವಿಚಾರ ಇಂದು ಅಧಿವೇಶನದಲ್ಲಿ (Session) ಚರ್ಚೆ ಆಯ್ತು. ಆಡಳಿತ ವಿಪಕ್ಷ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ರು. ಮೋದಿ ಸರ್ಕಾರ ಮನ್ರೇಗಾ ಬದಲಿಗೆ ಜಿ ರಾಮ್ ಜಿ ಕಾನೂನು ತಂದು, ಸಾಲು ಸಾಲು ಬದಲಾವಣೆ ಮಾಡಿದೆ.
ಅದೇ ಕಾರಣಕ್ಕೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಇದೇ ವಾರ ಬೆಂಗಳೂರಲ್ಲಿ ಬೃಹತ್ ಸಮಾವೇಶ ನಡೆಸಿ ಕೈ ಪಡೆ ಆಕ್ರೋಶ ಹೊರಹಾಕಿತ್ತು. ಆದ್ರೀಗ ಸಿದ್ದು ಸರ್ಕಾರ ಹೊಸ ವಿವಾದದಲ್ಲಿ ಸಿಲುಕಿದೆ. ಸಿದ್ದರಾಮಯ್ಯ ಸರ್ಕಾರ ಇವತ್ತು ಮನ್ರೇಗಾ ಕುರಿತು ಜಾಹೀರಾತು ನೀಡಿದೆ. ಅದನ್ನು ಕಂಡು ವಿಪಕ್ಷ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಸುಖಾ ಸುಮ್ಮನೇ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ
ಸರ್ಕಾರದಿಂದ ಮನರೇಗಾ ಜಾಹೀರಾತು ನೀಡಿದಕ್ಕೆ ಕೇಸರಿ ಪಾಳಯ ಕೆರಳಿ ಕೆಂಡವಾಗಿದೆ. ಯಾರಪ್ಪನ ಮನೆ ದುಡ್ಡು ಅಂತ ಜಾಹೀರಾತು ಹಾಕಿದ್ದೀರಿ ಎಂದು ವಿಧಾನಸಭೆಯಲ್ಲಿ ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಜಾಹೀರಾತು ಕೊಡಿ, ತೆರಿಗೆ ಹಣದಲ್ಲಿ ಅಲ್ಲ ಅಂತ ಯತ್ನಾಳ್ ಕಿಡಿಕಾರಿದ್ರು.
ಕೇಂದ್ರ ಸರ್ಕಾರ ನಡೆಯುತ್ತಿರುವುದು ಕರ್ನಾಟಕದ ಜನರ ತೆರಿಗೆ ಹಣದಿಂದಲೇ ಹೊರತು ಕಾಂಗ್ರೆಸ್‌ನವರಿಂದಲ್ಲ ಎಂದು ಆಕ್ಷೇಪಿಸಿದರು. ಸುದೀರ್ಘ ವಾಗ್ವಾದದ ನಂತರ ಬಲವಾಗಿ ಜಾಹೀರಾತು ನೀಡಿರುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು. ಇದರಿಂದ ತೃಪ್ತರಾಗದೇ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು.