ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) 120ಕ್ಕೂ ಹೆಚ್ಚು ಹಿರಿಯ ವಿಜ್ಞಾನಿಗಳು ಹಾಗೂ ತಾಂತ್ರಿಕ ತಜ್ಞರು ಕಳೆದ ಒಂದು ವರ್ಷದಲ್ಲಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ತೀವ್ರ ಸಂಚಲನ ಮೂಡಿಸಿದೆ. ಆದರೆ, ಈ ಎಲ್ಲಾ ಆತಂಕ ಹಾಗೂ ಊಹಾಪೋಹಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಪ್ರಮುಖ ಸ್ಪಷ್ಟನೆ ನೀಡಿದೆ.
‘ಚಂದ್ರಯಾನ-3’ ಹಾಗೂ ಸ್ಪೇಸ್ ಡಾಕಿಂಗ್ ಪ್ರಯೋಗ (Spadex) ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ವಿಜ್ಞಾನಿಗಳೂ ಸೇರಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಕಳವಳಕ್ಕೆ ಕಾರಣವಾಗಿತ್ತು. ಕೇಂದ್ರ ಬಾಹ್ಯಾಕಾಶ ಇಲಾಖೆಯು (DOS) ಇತ್ತೀಚೆಗೆ ವಿಜ್ಞಾನಿಗಳ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ (VRS) ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ಸರ್ಕಾರದ ಈ ಕಠಿಣ ನಿಯಮಾವಳಿಗಳಿಂದ ಬೇಸತ್ತು ಹಿರಿಯ ವಿಜ್ಞಾನಿಗಳು ಇಸ್ರೋ ತೊರೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಗುರುವಾರ ಈ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು, ಸರ್ಕಾರದ ಹೊಸ ನಿಯಮಗಳಿಗೂ ಹಾಗೂ ವಿಜ್ಞಾನಿಗಳ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಇಸ್ರೋ ತೊರೆಯುತ್ತಿರುವ ವಿಜ್ಞಾನಿಗಳ ನಿರ್ಧಾರಕ್ಕೆ ನಿಯಮಾವಳಿಗಳ ಬದಲಾವಣೆ ಕಾರಣ ಎಂಬ ಊಹೆಗಳು ತಪ್ಪು. ಇಲಾಖೆಯಲ್ಲಿ ಸಂಪೂರ್ಣವಾಗಿ ಆಡಳಿತಾತ್ಮಕ ಕಾರಣಗಳಿಗಾಗಿ ಹಾಗೂ ಕೆಲಸದಲ್ಲಿ ಮತ್ತಷ್ಟು ಪಕ್ವತೆ ಮತ್ತು ದಕ್ಷತೆಯನ್ನು ತರುವ ಉದ್ದೇಶದಿಂದ ಮಾತ್ರ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದಿದ್ದಾರೆ.
ಇಸ್ರೋದಂತಹ ಬೃಹತ್ ಹಾಗೂ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರತಿಭಾನ್ವಿತ ಸಿಬ್ಬಂದಿಯ ವರ್ಗಾವಣೆ ಅಥವಾ ಬದಲಾವಣೆ ಎಂಬುದು ಅತ್ಯಂತ ಸಾಮಾನ್ಯ ಸಂಗತಿಯಾಗಿದೆ.ಇಸ್ರೋದಿಂದ ಅನೇಕರು ಹೋಗಿದ್ದಾರೆ, ಹೊಸದಾಗಿ ಅನೇಕರು ಬಂದಿದ್ದಾರೆ. ಇದರಲ್ಲಿ ಯಾವುದೇ ರೀತಿಯ ವಿವಾದವಿಲ್ಲ ಎಂದು ಹೇಳುವ ಮೂಲಕ ಸಿಬ್ಬಂದಿ ಕೊರತೆ ಅಥವಾ ಸಂಸ್ಥೆಯಲ್ಲಿನ ಆಂತರಿಕ ಬಿಕ್ಕಟ್ಟಿನ ಬಗ್ಗೆ ಹರಿದಾಡುತ್ತಿದ್ದ ವರದಿಗಳನ್ನು ಅವರು ಸಾರಾಸಗಟಾಗಿ ತಳ್ಳಿಹಾಕಿದರು.
ಇದನ್ನೂ ಓದಿ: TECH TIPS : ನಿಮ್ಮ ಫೋನ್ ಎಷ್ಟು ವರ್ಷ ಬಾಳಿಕೆ ಬರುತ್ತೆ? ಮೊಬೈಲ್ ಬದಲಾಯಿಸಲು ಒಳ್ಳೆ ಸಮಯ ಯಾವುದು ಗೊತ್ತಾ?