ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದ ಧೃವನಾರಾಯಣ್ ವಿಧಿವಶರಾಗಿ 28 ದಿನಗಳು ಕಳೆಯುವುದರೊಳಗಾಗಿ ಧೃವನಾರಾಯಣ್ ಪತ್ನಿ ವೀಣಾ ಕೂಡಾ ಇಹಲೋಕ ತ್ಯಜಿಸಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡಿರುವ ಅವರ ಪುತ್ರ ದರ್ಶನ್ ಧೃವನಾರಾಯಣ್ ಪರ ಅನುಕಂಪದ ಅಲೆ ಎದ್ದಿದೆ.
ದರ್ಶನ್‌ಗಾಗಿ ಹೆಚ್.ಸಿ.ಮಹದೇವಪ್ಪ ಕ್ಷೇತ್ರ ತ್ಯಾಗ ಮಾಡಿದ್ರೆ ಇದೀಗ ಜೆಡಿಎಸ್ ಕೂಡಾ ದರ್ಶನ್‌ಗೆ ಬೆಂಬಲ ಸೂಚಿಸಿದೆ. ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧೃವನಾರಾಯಣಗೆ ವಿರುದ್ಧ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಅವರಿಗೆ ಬೆಂಬಲಿಸಲು ದಳಪತಿಗಳು ಮುಂದಾಗಿದ್ದಾರೆ. ಈ ಬಗ್ಗೆ ಜೆಡಿಎಸ್ ನಾಯಕರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತೆನಾಡಿದ ಜಿ.ಟಿ.ದೇವೇಗೌಡ, ದಿವಂಗತ ಧೃವನಾರಾಯಣ್ ಮಕ್ಕಳು ಅನಾಥರಾಗಿದ್ದಾರೆ. ಧೃವನಾರಾಯಣರ ಇಬ್ಬರು ಮಕ್ಕಳು ಲವ ಕುಶ ರೀತಿ ಕಾಣುತ್ತಿದ್ದಾರೆ. ತಂದೆ ಕಳೆದುಕೊಂಡ ನೋವು ಇರುವಾಗಲೇ ತಾಯಿ ಕಳೆದುಕೊಂಡಿದ್ದಾರೆ. ಇಂತಹ ದುಃಖದಲ್ಲಿರುವವರ ಎದುರು ಸ್ಪರ್ಧಿಸಲು ನಮಗೆ ಮನಸ್ಸು ಒಪ್ಪುತ್ತಿಲ್ಲ. ಎಂದರು.
ಇನ್ನು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪ್ರತಿಕ್ರಿಯಿಸಿದ್ದು,ಧೃವನಾರಾಯಣ್ ಅಗಲಿಕೆ ಹಿನ್ನೆಲೆ ದರ್ಶನ್‌ಗೆ ಬೆಂಬಲ ಕೊಡಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಮೈಸೂರು ಭಾಗದ ಶಾಸಕರು ಮುಖಂಡರ ಜೊತೆ ಹೆಚ್ ಡಿ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಅವರೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುತ್ತಾರೆ. ಖುದ್ದು ಕುಮಾರಸ್ವಾಮಿ ಅವರು ದರ್ಶನ್‌ಗೆ ಸಾಂತ್ವನ ಹೇಳಿ ಬೆಂಬಲ ಘೋಷಿಸುತ್ತಾರೆ ಎಂದು ಹೇಳಿದರು