ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಚುನಾವಣೆ ಆಯೋಗ ಘೋಷಿಸಿದರೂ ರಾಜಕಾರಣಿಗಳಿಂದ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಖಯಾಲಿ ಇನ್ನೂ ತಪ್ಪಿಲ್ಲ. ಇದರಿಂದ ಅವರು ಅವರೇ ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಪೊಲೀಸ್ ಠಾಣಾ ಮೆಟ್ಟಿಲೇರುವ ಪರಿಸ್ಥಿತಿ ಎದುರಾಗುತ್ತಿದೆ. ಮುನಿರತ್ನ ಅವರ ಮೇಲೂ ಪ್ರಚೋದನಕಾರಿ ಭಾಷಣ ಸಂಬಂಧ ಆರೋಪ ಎದುರಿಸುತ್ತಿರುವ ಬೆನ್ನಲ್ಲೇ ನಟಿಯ ಮೇಲೂ ಪ್ರಚೋದನಕಾರಿ ಭಾಷಣದ ಆರೋಪ ಕೇಳಿ ಬಂದಿದೆ.
ನಟಿ ಶೃತಿ ಅವರು ಬಿಜೆಪಿ ಮಹಿಳಾ ಸಮಾವೇಶದ ಸಮಯದಲ್ಲಿ ವಂಶದ ಬಗ್ಗೆ ಮಾತನಾಡುತ್ತಾ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಜೆಡಿಎಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದೆ.
ಹಿರೇಕೆರೂರು ಕ್ಷೇತ್ರದಲ್ಲಿ ಭಾಷಣ ಮಾಡುವ ಸಂಧರ್ಭದಲ್ಲಿ ನಿಮ್ಮ ವಂಶ ಬಿಟ್ಟು ಬೇರೆ ವಂಶ ಬೆಳೆಯಬೇಕು ಎಂದರೆ ಜೆಡಿಎಸ್‌ಗೆ ಮತ ಹಾಕಿ, ನಿಮ್ಮ ವಂಶ ಬಿಟ್ಟು ಬೇರೆ ದೇಶದ ವಂಶ ಬೆಳೆಯಬೇಕು ಎಂದರೆ ಕಾಂಗ್ರೆಸ್‌ಗೆ ಮತ ನೀಡಿ. ದೇಶದ ವಂಶ ಬೆಳೆಯಬೇಕು ಎಂದರೆ ಬಿಜೆಪಿಗೆ ಮತ ನೀಡಿ ಎಂದು ನಟಿ ಶೃತಿ ಭಾಷಣ ಮಾಡಿದ್ದರು.
ಈ ರೀತಿಯಾದ ನಟಿ ಶೃತಿ ಪ್ರಚೋದನಕಾರಿ ಭಾಷಣ ಮಾಡಿ ಮತದಾರರನ್ನು ಒಲಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಅವರ ಮೇಲೆ ಕ್ರಮ ತೆಗದುಕೊಳ್ಳುವಂತೆ ದೂರು ನೀಡಲಾಗಿದೆ.