ಬೆಂಗಳೂರು: ರಾಜ್ಯ ಸರ್ಕಾರ ರಚಿಸಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರೊಬ್ಬರು ತಮ್ಮ ಕಾರಿನ ಮೇಲೆ ಸರ್ಕಾರದ ಹೆಸರು ಮತ್ತು ಲಾಂಛನ ಬಳಸಿ ನಿಯಮ ಮೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯ ಸರ್ಕಾರವು ತನ್ನ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಜಿಲ್ಲಾವಾರು ಸಮಿತಿಗಳನ್ನು ರಚಿಸಿದ್ದು, ಈ ಸಮಿತಿಗಳ ಸದಸ್ಯರಿಗೆ ಪ್ರತಿ ತಿಂಗಳು ಗೌರವಧನ ನೀಡಲಾಗುತ್ತಿದೆ. ಆದರೆ,ಈ ಗೌರವಧನದ ಮೊತ್ತ ಕೋಟಿಗಟ್ಟಲೆ ರೂಪಾಯಿಗಳಷ್ಟಿದ್ದು, ಇದಕ್ಕೆ ರಾಜ್ಯದ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ಗ್ಯಾರಂಟಿ ಯೋಜನೆಗಳ ಹಣ ಸಕಾಲಕ್ಕೆ ಫಲಾನುಭವಿಗಳ ಕೈ ಸೇರುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದರೂ, ಸರ್ಕಾರವು ಈ ಸಮಿತಿಗಳಿಗೆ ಅನುದಾನ ಬಿಡುಗಡೆ ಮಾಡಿ ಟೀಕೆಗೆ ಗುರಿಯಾಗಿತ್ತು.
ಈ ನಡುವೆ, ವಿಜಯಪುರ ಜಿಲ್ಲೆಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕುರಿ ಶಿವಮೂರ್ತಿ ಎಂಬುವವರು ತಮ್ಮ ಖಾಸಗಿ ಕಾರಿನ ಮೇಲೆ “ಕರ್ನಾಟಕ ಸರ್ಕಾರ” ಎಂದು ಬರೆಸಿಕೊಂಡು ನಿಯಮ ಉಲ್ಲಂಘಿಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಸಂಬಂಧಿತ ಫೋಟೋಗಳನ್ನು ಬಿಡುಗಡೆ ಮಾಡಿರುವ ಜೆಡಿಎಸ್, ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಗ್ಯಾರಂಟಿ ಸಮಿತಿಗೆ ನೇಮಕವಾಗಿರುವ ಬರಗೆಟ್ಟ ಕಾಂಗ್ರೆಸ್ ಪುಡಾರಿಗಳು ಜನರಿಂದ ಆಯ್ಕೆಯಾದ ಶಾಸಕರಿಗಿಂತಲೂ ಹೆಚ್ಚು ಮೆರೆಯುತ್ತಿದ್ದಾರೆ. ಜನರ ಬೆವರಿನ ತೆರಿಗೆ ಹಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾತ್ರೆ ಮಾಡುತ್ತಿದ್ದಾರೆ. ವೈಯಕ್ತಿಕ ಬಳಕೆಯ ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರದ ಹೆಸರು, ಚಿಹ್ನೆ ಮತ್ತು ಲಾಂಛನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ದೂರಿದೆ.