ಬೆಂಗಳೂರು : ಜೆಡಿಎಸ್ಗೆ ನೂತನ ರಾಜ್ಯಾಧ್ಯಕ್ಷರ ಆಯ್ಕೆಯು ಚುನಾವಣೆ ಮೂಲಕ ಮಾಡುವ ಕುರಿತು ನಿನ್ನೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದರ ನಡುವೆಯೇ ರಾಜ್ಯಾಧ್ಯಕ್ಷ ಸ್ಥಾನವನ್ನು ನಿಖಿಲ್ ಕುಮಾರಸ್ವಾಮಿ ಬದಲು, ಜೆಡಿಎಸ್ನ ಹಿರಿಯ ನಾಯಕ, ಶಾಸಕ ಜಿಟಿ.ದೇವೇಗೌಡ ಅವರ ಪುತ್ರ ಹಾಗೂ ಶಾಸಕ ಜಿಟಿ ಹರೀಶ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪಕ್ಷದಲ್ಲಿ ತಮಗೆ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಯಲ್ಲಿ ಅಂತರ ಕಾಯ್ದುಕೊಂಡು, ಕಾಂಗ್ರೆಸ್ ಜೊತೆಗೆ ಹೆಚ್ಚಾಗಿ ಜಿಟಿಡಿ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಜಿಟಿಡಿ ಕಾಂಗ್ರೆಸ್ಗೆ ಸೇರುವ ಸಂಭವವಿದ್ದು, ಇದನ್ನು ಬ್ರೇಕ್ ಹಾಕಲು ದಳಪತಿಗಳು ಜಿಟಿಡಿ ಅವರ ಪುತ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರಂತೆ.
ಹೀಗೆ ಮಾಡಿದಲ್ಲಿ, ಪಕ್ಷಕ್ಕೆ ಅಂಟಿಕೊಂಡಿರುವ ಕುಟುಂಬ ರಾಜಕಾರಣದ ಹಣೆಪಟ್ಟಿ ಕಳಚಿ, ಪಕ್ಷ ಸಂಘಟನೆಗೆ ಮತ್ತಷ್ಟೂ ಬಲ ಸಿಗಲಿದೆ ಎಂಬ ಲೆಕ್ಕಾಚಾರವನ್ನು ಕುಮಾರಸ್ವಾಮಿ ಅವರು ಹಾಕಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ. ಕೆಲ ನಾಯಕರು ಜಿಟಿಡಿ ಪರವಾಗಿದ್ದು, ಅವರ ಪುತ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ದೇವೇಗೌಡರ ಬಳಿಯೂ ತಮ್ಮ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ.