ಜೆಡಿಎಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವ ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಬಿಜೆಪಿ ಸೇರಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ರ ಸಮ್ಮುಖದಲ್ಲಿ ರಾಮಸ್ವಾಮಿ ಕಮಲ ಪಕ್ಷ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವರು ಅವರಿಗೆ ಮೆಂಬರ್‌ಶಿಪ್ ಕಾರ್ಡ್ ನೀಡಿ, ಹೂಗುಚ್ಛ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.
ಅತ್ಯಂತ ಸಂತೋಷದಿಂದ ಬಿಜೆಪಿ ಸೇರಿದ್ದೇನೆ ಎಂದ ರಾಮಸ್ವಾಮಿ, ಇಂದು ಸಂಜೆ ಅಥವಾ ನಾಳೆ ಮೋದಿ, ಅಮಿತ್ ಶಾ, ನಡ್ಡಾರನ್ನು ಭೇಟಿಯಾಗುತ್ತಿದ್ದೇನೆ. ಇಡೀ ವಿಶ್ವದಲ್ಲೇ ಭಾರತ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ, ಭಾರತದ ಅಭಿವೃದ್ಧಿಗೋಸ್ಕರ ಬಿಜೆಪಿ ನಾಯಕರು ಶ್ರದ್ಧೆಯಿಂದ ಕೆಲಸ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಎ.ಟಿ ರಾಮಸ್ವಾಮಿ ಅವರು ಸರಿಯಾದ ನಿರ್ಧಾರ ತೆಗೆದುಕೊಂಡು ದೇಶದ ಅತಿದೊಡ್ಡ ಪಕ್ಷವನ್ನು ಸೇರಿದ್ದಾರೆ. ಅವರು ಬಿಜೆಪಿ ಸೇರುವುದರಿಂದ ಪಕ್ಷಕ್ಕೂ ಶಕ್ತಿ ಸಿಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರದ ಸಾಧನೆ ಚುನಾವಣಾ ಫಲಿತಾಂಶದಲ್ಲಿ ತಿಳಿಯಲಿದೆ ಎಂದು ಠಾಕೂರ್ ಹೇಳಿದ್ದಾರೆ.