Thursday, March 12, 2026
Homeಟಾಪ್ ನ್ಯೂಸ್ಪೊಲೀಸ್ ಅಧಿಕಾರಿಗಳ ವಿರುದ್ಧ ಹೆಚ್‌ಡಿಕೆ ಆಕ್ರೋಶ; ಎಚ್ಚರಿಕೆ

ಪೊಲೀಸ್ ಅಧಿಕಾರಿಗಳ ವಿರುದ್ಧ ಹೆಚ್‌ಡಿಕೆ ಆಕ್ರೋಶ; ಎಚ್ಚರಿಕೆ

ಬೆಂಗಳೂರು: ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುವವರ ವಿರುದ್ಧ ಪೊಲೀಸರ ದೌರ್ಜನ್ಯ ಮಿತಿಮೀರಿದೆ. ಇದಕ್ಕೆ ಕಡಿವಾಣ ಹಾಕಿಕೊಳ್ಳದಿದ್ದರೆ ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಎಚ್ಚರಿಕೆ ನೀಡಿದರು.

ಯಲಹಂಕ ನ್ಯೂ ಟೌನ್ ಸೇರಿದಂತೆ ಕ್ಷೇತ್ರದ ಹಲವಾರು ಕಡೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಯಲಹಂಕದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಆಗುತ್ತಿದೆ. ಅನ್ಯ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಸೇರಲು ಬರುವ ಮುಖಂಡರು, ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಈ ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ, ನೀವು ಪ್ರತಿ ತಿಂಗಳು ಸಂಬಳ ಪಡೆಯುವುದು ಜನರ ತೆರಿಗೆ ದುಡ್ಡಿನಿಂದ. ನೀವು ಅವರ ಸೇವೆ ಮಾಡಬೇಕೆ ವಿನಾ ಯಾರೋ ಶಾಸಕ ಹೇಳಿದಕ್ಕೆಲ್ಲ ತಲೆ ಆಡಿಸುವುದಲ್ಲ. ಇನ್ನೂ ಒಂದೇ ತಿಂಗಳು, ಆಗ ಈ ಸರಕಾರ ಇರಲ್ಲ. ಆಗ ನೀವು ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕರ್ತರು, ಮುಖಂಡರು ಹೆದರಬೇಕಿಲ್ಲ, ಯಾವುದೇ ಸಂದರ್ಭ ಬಂದರೂ ನೇರವಾಗಿ ನನ್ನನ್ನು ಸಂಪರ್ಕ ಮಾಡಬಹುದು ಎಂದು ಕುಮಾರಸ್ವಾಮಿ ಅವರು ಧೈರ್ಯ ತುಂಬಿದರು.

ನನಗೆ ದ್ವೇಷದ ರಾಜಕಾರಣ ಮಾಡಿ ಗೊತ್ತಿಲ್ಲ. ಎಲ್ಲರೂ ಸುಖ ಶಾಂತಿಯಿಂದ ಇರಬೇಕು ಎಂದು ಬಯಸುವವನು. ಹೀಗಾಗಿ ಇಂಥ ಆಡಳಿತ ಬೇಕು ಎನ್ನುವುದನ್ನು ಜನರೇ ತೀರ್ಮಾನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಕ್ಷೇತ್ರದ ಅಭ್ಯರ್ಥಿ ಮುನೇಗೌಡ, ಮಾಜಿ ಶಾಸಕ ಇ ಕೃಷ್ಣಪ್ಪ, ಪಕ್ಷದ ಯಲಹಂಕ ಕ್ಷೇತ್ರದ ಅಧ್ಯಕ್ಷ ಕೃಷ್ಣಪ್ಪ, ಪಕ್ಷದ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ

Change Language »
error: Content is protected !!