ಹಾಸನ : ಶ್ರವಣ ಬೆಳಗೊಳ ಜೈನ ಮಠದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (73) ಜಿನೈಕ್ಯರಾಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅವರು ಅಸ್ವಸ್ಥರಾಗಿದ್ದರು. ಅಹಿಂಸೆ, ತ್ಯಾಗ ಹಾಗೂ ಶಾಂತಿ ಇವುಗಳು ಚಾರುಕೀರ್ತಿ ಭಟ್ಟಾರಕರ ಬೋಧನೆಯ ಮೂಲಮಂತ್ರವಾಗಿತ್ತು. ಜೈನ ಪರಂಪರೆಯ ಪುನರುತ್ಥಾನಕ್ಕಾಗಿ ಕಳೆದ ಐದು ದಶಕಗಳಿಂದ ಸ್ವಾಮೀಜಿ ಶ್ರಮಿಸುತ್ತಿದ್ದರು.
ವಯೋಸಹಜ ಅಸ್ವಸ್ಥತೆಯಿಂದಾಗಿ ಸ್ವಾಮೀಜಿ ಹಲವು ದಿನಗಳಿಂದ ವಿಶ್ರಾಂತಿಯಲ್ಲಿದ್ದರು. ಗುರುವಾರ ಬೆಳಗ್ಗೆ ಅವರು ಭಂಡಾರ ಭವನದಲ್ಲಿ ಕುಸಿದು ಬಿದ್ದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದ್ದರೆ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆಂದು ಶ್ರವಣಬೆಳಗೊಳ ಜೈನ ಮಠದ ಮೂಲಗಳು ತಿಳಿಸಿವೆ.
ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನಾದ್ಯಂತ ಹಲವು ಗಣ್ಯರು ಸ್ವಾಮೀಜಿ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಜೈನ ಸಂಪ್ರದಾಯದಂತೆ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ. ಜೈನ ಸಮಾಜದ ಎಲ್ಲ ಗಣ್ಯರೂ ಈ ವೇಳೆ ಹಾಜರಿರಲಿದ್ದಾರೆ. ಶ್ರೀಗಳಿಗೆ ದೇಶವಿದೇಶಗಲ್ಲಿ ಶಿಷ್ಯವೃಂದವಿರುವ ಕಾರಣ, ವಿದೇಶಗಳಿಂದ ಭಕ್ತರೂ ಸಹ ಆಗಮಿಸಲಿದ್ದಾರೆ.