ಕರ್ನಾಟಕದ ಬೆಳಗಾವಿಯ ಜೈಲಿನಲ್ಲಿರುವ ಕೊಲೆ ಆರೋಪಿಯೊಬ್ಬ ಮಂಗಳವಾರ ನಾಗ್ಪುರದಲ್ಲಿರುವ ಕೇಂದ್ರ ರಸ್ತೆ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಎರಡನೇ ಬಾರಿಗೆ ಕರೆ ಮಾಡಿದ್ದು, 10 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾನೆ. ಅಲ್ಲದೆ, ತಾನು ಕೇಳಿದ ಮೊತ್ತವನ್ನು ಪಾವತಿಸಲು ವಿಫಲವಾದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾನೆ.
ಬೆಳಗಾವಿ ಜೈಲಿನಲ್ಲಿರುವ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ, ಜನವರಿ 14 ರಂದು ಕೇಂದ್ರ ಸಚಿವರಿಗೆ ಮೊದಲ ಬಾರಿ ಕರೆ ಮಾಡಿದ್ದು, 100 ಕೋಟಿ. ರೂಗೆ ಬೇಡಿಕೆ ಇಟ್ಟಿದ್ದ. ಎರಡನೇ ಬಾರಿ ಮಾಡಿದ ಕರೆಯಲ್ಲಿ ಸುಲಿಗೆ ಮೊತ್ತವನ್ನು 10 ಕೋಟಿ. ರೂ ಗೆ ಇಳಿಸಿದ್ದಾನೆ.
ಫೋನ್ ಕರೆಯನ್ನು ಟ್ರೇಸ್ ಮಾಡಿದಾಗ ಬೆಳಗಾವಿ ಜೈಲಿನಲ್ಲಿರುವ ಜಯೇಶ್‌ನ ಬ್ಯಾರಕ್ ನಿಂದ ಬಂದಿರುವ ಕರೆ ಎನ್ನುವುದು ಕಂಡು ಬಂದಿದ್ದು, ಜೈಲಿನೊಳಗೆ ಯಾವುದೇ ಫೋನ್ ಪತ್ತೆಯಾಗದಿರುವುದು ಪೊಲೀಸರ ಅಚ್ಚರಿಗೆ ಕಾರಣವಾಗಿದೆ. ಎರಡೆರಡು ಬಾರಿ ಕೇಂದ್ರ ಸಚಿವರಿಗೆ ಬೆದರಿಕೆ ಹಾಕುವ ಹಾಗೆ ಜೈಲಿನಲ್ಲಿರುವ ಖೈದಿಗೆ ಫೋನ್ ಹೇಗೆ ಸಿಗುತ್ತಿದೆ ಎಂದು ನಾಗ್ಪುರ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ.