ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಜೈನ್ ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷ್ಯವನ್ನು ಹಾಳುಮಾಡಬಹುದು ಎಂದು ಹೇಳಿದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಈ ವಿಷಯದಲ್ಲಿ ಬಹು ಆಯಾಮದ ವಿಚಾರಣೆ ನಂತರ ಪ್ರತಿವಾದಿ ಮತ್ತು ಪ್ರಾಸಿಕ್ಯೂಷನ್ ಕಡೆಯವರ ವಾದವನ್ನು ಆಲಿಸಿದ್ದ ನ್ಯಾಯಾಲಯ ಮಾರ್ಚ್ 21 ರಂದು ತೀರ್ಪನ್ನು ಕಾಯ್ದಿರಿಸಿತ್ತು.
ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಜೈನ್ ಮತ್ತು ಇತರ ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಸ್ಪಷ್ಟವಾಗಿದೆ ಎಂದು ಹೇಳಿದರು. ಇಡಿ ಮುಂದೆ 7 ಬಾರಿ ಹಾಜರಾಗಿದ್ದು, ತನಿಖೆಗೆ ಸಹಕರಿಸಿರುವುದಾಗಿ ಸತ್ಯೇಂದ್ರ ಜೈನ್ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಮೇ 30, 2022 ರಂದು ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು. ಸತ್ಯೇಂದ್ರ ಜೈನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.