ಬೆಂಗಳೂರು : ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೈಲು ಸೇರಿರುವ ವಿಚಾರಣಾಧೀನ ಕೈದಿಗಳ (Accused) ಆಸ್ತಿ ಹಕ್ಕುಗಳಿಗೆ (Property Rights) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (Karnataka High Court) ಅತ್ಯಂತ ಪ್ರಮುಖವಾದ ತೀರ್ಪನ್ನು ನೀಡಿದೆ.
ಕೇವಲ ಜೈಲಿನಲ್ಲಿದ್ದಾರೆ ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿಯ ಆಸ್ತಿ ಹಕ್ಕುಗಳು ಕೊನೆಗೊಳ್ಳುವುದಿಲ್ಲ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರಲು ಸಾಧ್ಯವಿಲ್ಲ ಎಂದಾಕ್ಷಣ ಅವರ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಜೈಲಿನಿಂದಲೇ ಆಸ್ತಿ ಮಾರಾಟ ಮತ್ತು ನೋಂದಣಿಗೆ ಮುಕ್ತ ಅವಕಾಶ
ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಬಸವರಾಜು ಶಂಕರಪ್ಪ ಅವಣ್ಣವರ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಜೈಲಿನಲ್ಲಿದ್ದುಕೊಂಡೇ ಒಬ್ಬ ಕೈದಿ ತನ್ನ ಚರ ಮತ್ತು ಸ್ಥಿರ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಬೇರೆಯವರ ಹೆಸರಿಗೆ ನೋಂದಣಿ ಮಾಡಿಕೊಡಲು ಕಾನೂನಿನಲ್ಲಿ ಸಂಪೂರ್ಣ ಅವಕಾಶವಿದೆ ಎಂದು ಹೈಕೋರ್ಟ್ ಹೇಳಿದೆ.
ಜೈಲುವಾಸ ಎಂದರೆ ‘ಅಸ್ತಿತ್ವದಲ್ಲಿಲ್ಲ’ ಎಂದು ಭಾವಿಸುವಂತಿಲ್ಲ
ವಿಚಾರಣೆಯ ವೇಳೆ ಕಠಿಣ ಮಾತುಗಳಲ್ಲಿ ಆಡಳಿತ ವ್ಯವಸ್ಥೆಗೆ ಎಚ್ಚರಿಕೆ ನೀಡಿದ ನ್ಯಾಯಪೀಠ, ಅಪರಾಧದ ಆರೋಪ ಎದುರಿಸುತ್ತಿರುವ ಮತ್ತು ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯನ್ನು ಕೇವಲ ಜೈಲಿನಲ್ಲಿದ್ದಾನೆ ಎಂಬ ಒಂದೇ ಕಾರಣಕ್ಕೆ ಆತ ಅಸ್ತಿತ್ವದಲ್ಲಿಲ್ಲ ಎಂದು ಭಾವಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದೆ.
ಜೈಲುವಾಸವು ಒಬ್ಬ ವ್ಯಕ್ತಿಯ ಆಸ್ತಿಯ ಮಾಲೀಕತ್ವವನ್ನು ಕಿತ್ತುಕೊಳ್ಳುವುದಿಲ್ಲ. ಸಾಮಾನ್ಯ ಪ್ರಜೆಯಂತೆ ಆತನಿಗೂ ತನ್ನ ಆಸ್ತಿಯನ್ನು ಪರಭಾರೆ ಮಾಡುವ, ವರ್ಗಾಯಿಸುವ ಅಥವಾ ಮಾರಾಟ ಮಾಡುವ ಎಲ್ಲ ಹಕ್ಕುಗಳು ಮುಂದುವರಿಯಲಿವೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.
ಜೈಲಿಗೇ ಬಂದು ರಿಜಿಸ್ಟ್ರೇಷನ್ ಮಾಡಿಕೊಡಬೇಕು ಉಪನೋಂದಣಾಧಿಕಾರಿ
ನೋಂದಣಿ ಕಾಯಿದೆ 1908ರ ಸೆಕ್ಷನ್ 38ರ ನಿಯಮಗಳನ್ನು ನೆನಪಿಸಿದ ಹೈಕೋರ್ಟ್, ಜೈಲಿನಲ್ಲಿರುವ ವ್ಯಕ್ತಿಗಳು ಎದುರಿಸುತ್ತಿರುವ ಪ್ರಾಯೋಗಿಕ ಸಮಸ್ಯೆಗಳನ್ನು ಕಾನೂನು ಮೊದಲೇ ಗುರುತಿಸಿದೆ ಎಂದು ಹೇಳಿದೆ. ಜೈಲಿನಲ್ಲಿರುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ನೋಂದಣಾಧಿಕಾರಿಗಳ ಕಚೇರಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಒತ್ತಾಯಿಸುವಂತಿಲ್ಲ. ಬದಲಾಗಿ, ಉಪ ನೋಂದಣಾಧಿಕಾರಿಗಳೇ (ಸಬ್ ರಿಜಿಸ್ಟ್ರಾರ್) ನೇರವಾಗಿ ಜೈಲಿಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಆದೇಶಿಸಿದೆ.
ಜೈಲು ಅಧಿಕಾರಿಗಳಿಗೆ ಭದ್ರತೆ ಒದಗಿಸಲು ಹೈಕೋರ್ಟ್ ಕಡಕ್ ಆದೇಶ
ಈ ಇಡೀ ಪ್ರಕ್ರಿಯೆಗೆ ಅಗತ್ಯವಿರುವ ಸೌಲಭ್ಯ ಮತ್ತು ಸೂಕ್ತ ಭದ್ರತೆಯನ್ನು ಒದಗಿಸುವುದು ಜೈಲು ಸಿಬ್ಬಂದಿಯ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ನೆನಪಿಸಿದೆ. ಸಬ್ ರಿಜಿಸ್ಟ್ರಾರ್ ಜೈಲಿಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆಯನ್ನು ಮುಗಿಸಲು ತಕ್ಷಣವೇ ಅನುಮತಿ ನೀಡಬೇಕು ಮತ್ತು ಬಿಗಿ ಭದ್ರತೆ ಒದಗಿಸಬೇಕು ಎಂದು ಧಾರವಾಡ ಕೇಂದ್ರ ಕಾರಾಗೃಹದ ವರಿಷ್ಠಾಧಿಕಾರಿಗಳಿಗೆ ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ತೀರ್ಪು ಜೈಲಿನಲ್ಲಿರುವ ಅನೇಕ ಕೈದಿಗಳ ಕಾನೂನಾತ್ಮಕ ಹಕ್ಕುಗಳನ್ನು ಎತ್ತಿಹಿಡಿದಂತಾಗಿದೆ.
ಇದನ್ನೂ ಓದಿ : ಮನೆಯಲ್ಲಿರುವ ಚಿನ್ನಕ್ಕೆ ಸಿಗಲಿದೆ ಭರ್ಜರಿ ಬಡ್ಡಿ: ಸರ್ಕಾರ ತರುತ್ತಿದೆ ಹೊಸ ಗೋಲ್ಡ್ ಸ್ಕೀಮ್