ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಿಎಂ ಬಸವರಾಜ್ ಬೊಮ್ಮಾಯಿ ಬೆನ್ನುತಟ್ಟಿದ್ದಾರೆ. ಮೀಸಲಾತಿ ವಿಚಾರದಲ್ಲಿ ಬೊಮ್ಮಾಯಿ ನಿರ್ಧಾರ ಸರಿ ಇದೆ ಎನ್ನುವ ಮೂಲಕ ಮೀಸಲಾತಿ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಒಳಮೀಸಲಾತಿಗೆ ಬಂಜಾರಾ ಸಮುದಾಯ ವಿರೋಧಿಸುತ್ತಿರುವ ವಿಚಾರವಾಗಿ ಜಿಲ್ಲೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮೀಸಲಾತಿ ಸಮಸ್ಯೆ ಇವತ್ತಿಂದಲ್ಲ ಬಹಳ ವರ್ಷದಿಂದ ಇದೆ.
ಒಳಮೀಸಲಾತಿ ಬಗ್ಗೆ 20 ವರ್ಷದಿಂದ ಹೋರಾಟವಿದೆ. ಯಾವ ಪಾರ್ಟಿಯ ಯಾವ ಮುಖ್ಯಮಂತ್ರಿಯೂ ಈ ರೀತಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಜಾರಿ ತರಲು ಮುಂದೆ ಬಂದಿರಲಿಲ್ಲ. ಯಥಾಸ್ಥಿತಿ ಕಾಯ್ದುಕೊಂಡು ಹೋಗುವ ಪ್ರಯತ್ನ ಮಾಡಿದ್ದರು. ಯಾರು ಆ ಬಗ್ಗೆ ಆಲೋಚನೆ, ಚರ್ಚೆ ಮಾಡಿ ಗಟ್ಟಿ ನಿರ್ಧಾರ ಮಾಡಿರಲಿಲ್ಲ. ಮೊದಲ ಬಾರಿ ಬಿಜೆಪಿ ಸರಕಾರ ನಮ್ಮ ಮುಖ್ಯಮಂತ್ರಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ರು.
ಬೊಮ್ಮಾಯಿಯವರ ನಿರ್ಧಾರವನ್ನು ಎಲ್ಲರೂ ಸ್ವಾಗತ ಮಾಡಿದ್ದಾರೆ, ಕೆಲವೊಂದು ತಪ್ಪು ತಿಳಿವಳಿಕೆ, ಮಿಸ್ ಕಮ್ಯುನಿಕೇಶನ್ ಮುಖಾಂತರ ಗೊಂದಲ ಸೃಷ್ಟಿಯಾಗಿದೆ. ಬೀದಿಗಿಳಿದು ಹೋರಾಟ ಮಾಡುವ ಬದಲು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಬಹುದು. ಸಂಬಂಧಪಟ್ಟ ಸಚಿವರ ಜೊತೆ ಸಮಾಲೋಚನೆ, ಚರ್ಚೆ ಮಾಡಿದರೆ ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಿದೆ ಎಂದರು.