ಮಂಗಳೂರು: ಬಂಟ್ವಾಳದ ಮೂಲರಪಟ್ಣದಲ್ಲಿ ನವೀಕೃತ ಮಸೀದಿಯೊಂದರ ಉದ್ಘಾಟನೆ ವೇಳೆ ಬರೋಬ್ಬರಿ 4.33 ಲಕ್ಷ ರೂಪಾಯಿಗಳಿಗೆ ಹಲಸಿನ ಹಣ್ಣನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ.
ಮಸೀದಿ ಉದ್ಘಾಟನೆ ನಿಮಿತ್ತ ಧಾರ್ಮಿಕ ಪ್ರವಚನ ಆಯೋಜಿಸಲಾಗಿತ್ತು. ಪ್ರವಚನ ನಡೆಸಲು ಬಂದಿದ್ದ ಸಿರಾಜುದ್ದೀನ್ ಕಾಸಿಮಿ ಪಟ್ಟಣಪುರಂ ಅವರು ಪ್ರವಚನದ ಬಳಿಕ ಮಸೀದಿಗೆ ಕಾಣಿಕೆಯಾಗಿ ಬಂದಿದ್ದ ಹಲಸಿನ ಹಣ್ಣನ್ನು ಹರಾಜು ಹಾಕಲು ಪ್ರಾರಂಭಿಸಿದರು.
ಸ್ಥಳೀಯ ನಿವಾಸಿಗಳಾದ ಅಝೀಝ್ ಮತ್ತು ಲತೀಫ್ ಹಲಸಿನ ಹಣ್ಣಿಗೆ ಪೈಪೋಟಿ ನಡೆಸಿದ್ದು, ಕಡೆಗೂ ಬರೋಬ್ಬರಿ 4,33,333 ರೂ.ಗೆ ಹಲಸಿನ ಹಣ್ಣನ್ನು ಲತೀಫ್ ಖರೀದಿಸಿದ್ದಾರೆ. ಹರಾಜು ಪ್ರಕ್ರಿಯೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಧಾರ್ಮಿಕ ಕ್ಷೇತ್ರಗಳಿಗೆ ಕಾಣಿಕೆ, ಹರಕೆಯಾಗಿ ಬರುವ ವಸ್ತುಗಳನ್ನು ಹರಾಜಿಗೆ ಹಾಕಿ ಅದರಲ್ಲಿ ಬರುವ ದುಡ್ಡನ್ನು ಕ್ಷೇತ್ರದ ಅಗತ್ಯಗಳಿಗೆ ಬಳಸುವುದು ವಾಡಿಕೆ.
ಇಂತಹ ವಸ್ತುಗಳು ಪವಿತ್ರ ಹಾಗೂ ಹರಾಜಿನಲ್ಲಿ ತೆತ್ತ ದುಡ್ಡು ಆ ಧಾರ್ಮಿಕ ಸಂಸ್ಥೆಗೆ ಹೋಗುತ್ತದೆ ಎನ್ನುವ ಸದುದ್ದೇಶದಿಂದ ಇಂತಹ ಹರಾಜಿನಲ್ಲಿ ದುಡ್ಡಿನ ಮೊತ್ತ ನೋಡದೆ ಪ್ರಕ್ರಿಯೆಯಲ್ಲಿ ಹಲವರು ಭಾಗಿಯಾಗುತ್ತಾರೆ. ಇಂತಹದ್ದೇ ಒಂದು ಹರಾಜಿನಲ್ಲಿ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಲಕ್ಷಾಂತರ ರುಪಾಯಿಗಳಿಗೆ ಹಲಸೊಂದು ಹರಾಜು ಆಗಿರುವುದು ಸಾಕಷ್ಟು ಗಮನ ಸೆಳೆದಿದೆ.