ನಿರ್ಮಾಣ ಕಾಮಗಾರಿ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದ ದಿಗ್ಗಜ ಸಂಸ್ಥೆಯಾದ ಶೋಭಾ ಡೆಬಲಪರ್ಸ್ ಬೆಂಗಳೂರಿನ ಕಚೇರಿಗಳ ಮೇಲೆ ಸೋಮವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದಾರೆ. ವೈಟ್‍ಫೀಲ್ಡ್‍ನ ಹೂಡಿ ಬಳಿಯರುವ ಕಚೇರಿ ಹಾಗೂ ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿರುವ ಕಚೇರಿಯ ಮೇಲೆ ಐಟಿ ಇಲಾಖೆ ಸೋಮವಾರ ಬೆಳಗ್ಗೆ ಎಂಟರಿಂದಲೇ ದಾಳಿ ನಡೆಸಿ ದಸ್ತಾವೇಜುಗಳನ್ನು ತನಿಖೆಗೆ ಒಳಪಡಿಸಿದ್ದಾರೆ.
ತೆರಿಗೆ ವಂಚನೆಯೇ ಐಟಿ ದಾಳಿಗೆ ಕಾರಣ ಎನ್ನಲಾಗಿದ್ದು, ಶೋಭಾ ಡೆವಲಪರ್ಸ್ ಯೋಜನೆಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲಾಗುತ್ತಿದೆ.
ಐವತ್ತಕ್ಕೂ ಹೆಚ್ಚು ಮಂದಿ ಐಟಿ ಅಧಿಕಾರಿಗಳು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಪ್ರತ್ಯೇಕವಾಹನಗಳಲ್ಲಿ ಆಗಮಿಸಿ ಎರಡೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಸಿಕ್ಕಿರುವ ಅಕ್ರಮಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಹೊರಬಂದಿಲ್ಲ. ಒಂದೊಮ್ಮೆ ಪರಿಶೀಲನೆ ಪೂರ್ಣಗೊಂಡ ಬಳಿಕ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡಲಿದ್ದು, ತನಿಖೆ ಇಂದು ಸಂಜೆಯವರೆಗೂ ಮುಂದುವರೆಯುವ ನಿರೀಕ್ಷೆಯಿದೆ.