ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಟಿಕೆಟ್ ಆಕಾಂಕ್ಷಿ ಗುರಪ್ಪನಾಯ್ಡು ಮನೆಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ ಎಂಬ ವದಂತಿಗೆ ಸ್ವತಃ ಗುರಪ್ಪ ನಾಯ್ಡು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವಂತೆ ನನ್ನ ಮೇಲೆ ಯಾವುದೇ ಐಟಿ ದಾಳಿ ನಡೆದಿಲ್ಲ ಎಂದು ಗುರಪ್ಪ ನಾಯ್ಡು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಗೌರವಾನ್ವಿತ ಇಲಾಖೆಯಾಗಿದ್ದು, ಪೂರ್ವಾಪರ ಸಾಕ್ಷ್ಯಾಧಾರಗಳನ್ನು ಆಧರಿಸಿಯೇ ದಾಳಿ ನಡೆಸುತ್ತದೆ. ಪ್ರತಿವರ್ಷ ಪ್ರಾಮಾಣಿಕವಾಗಿ ಆದಾಯತೆರಿಗೆ ಪಾವತಿಸುವ ನನಗೆ ಮುಚ್ಚಿಡುವಂಥದ್ದು ಏನೂ ಇಲ್ಲ. ಐಟಿ ಅಧಿಕಾರಿಗಳು ನನ್ನ ಮೇಲೆ ದಾಳಿ ನಡೆಸಿದರೆ ನನ್ನ ಬಳಿ ಐವತ್ತು ಸಾವಿರ ರೂ.ಗಳಿಗಿಂತ ಹೆಚ್ಚಿಗೆ ಹಣ ಸಿಗುವುದಿಲ್ಲ ಎಂದು ಭರವಸೆಯಿಂದ ಹೇಳಬಲ್ಲೆ. ನನ್ನ ಮೇಲೆ ಕಾಳಜಿ ತೋರಿದ ಎಲ್ಲಾ ಮಿತ್ರರಿಗೂ ವಂದನೆ ಎಂದಿದ್ದಾರೆ.
ನೂರಾರು ಮಂದಿ ಐಟಿ ಅಧಿಕಾರಿಗಳ ತಂಡ ಕಾಂಗ್ರೆಸ್ ನಾಯಕರ ಮೇಲೆ ಕಣ್ಣಿಟ್ಟಿದ್ದು, ಚುನಾವಣೆಯ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿದ್ದರು.