ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಭಾರೀ ಜನಾಕ್ರೋಶ ದೇಶಾದ್ಯಂತ ಎದ್ದಿದೆ. ಪ್ರಧಾನಿ ನಿವಾಸದ ಮುಂದೆ ಉದ್ರಿಕ್ತ ಪ್ರತಿಭಟನಾಕಾರರು ಗಲಭೆ ನಡೆಸಿದ್ದು, ಪ್ರಧಾನಿ ತಲೆ ಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನೆತನ್ಯಾಹು ನೇತೃತ್ವದ ಸರ್ಕಾರ ತರಲು ಉದ್ದೇಶಿಸಿದ ಹೊಸ ಕಾನೂನಿನ ವಿರುದ್ಧ ಇಸ್ರೇಲಿಗರು ಕೆಂಗಣ್ಣು ಬೀರಿದ್ದು, ಸರ್ಕಾರ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ನ್ಯಾಯಾಂಗ ಸುಧಾರಣೆ ಹೆಸರಿನ ಹೊಸ ಕಾನೂನನ್ನು ನೆತನ್ಯಾಹು ಸರ್ಕಾರ ಪರಿಚಯಿಸಲು ಹೊರಟಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಈ ಕಾನೂನು ಅನುಷ್ಠಾನಗೊಂಡರೆ, ದೇಶದ ಸುಪ್ರೀಂ ಕೋರ್ಟ್ ನ ನಿರ್ಧಾರಗಳನ್ನು ರದ್ದುಗೊಳಿಸುವ ಹಕ್ಕನ್ನು ಇಸ್ರೇಲ್ ಸಂಸತ್ತು ಪಡೆಯುತ್ತದೆ. ಅದಕ್ಕೆ ‘ಓವರ್‌ರೈಡ್’ ಬಿಲ್ ಎಂದು ಹೆಸರಿಡಲಾಗಿದೆ. ಸಂಸತ್ತಿನಲ್ಲಿ ಯಾರಿಗೆ ಬಹುಮತವಿದೆಯೋ ಅವರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ರದ್ದುಪಡಿಸಲು ಸಾಧ್ಯವಾಗುತ್ತದೆ. ಇದು ದೇಶದ ಪ್ರಜಾಪ್ರಭುತ್ವ ಮತ್ತು ಸುಪ್ರೀಂ ಕೋರ್ಟ್ ಅನ್ನು ದುರ್ಬಲಗೊಳಿಸಲಿದೆ ಎಂದು ಪ್ರತಿಭಟನಾಕಾರರ ವಾದ.
ಈ ಕಾನೂನನ್ನು ಪ್ರಶ್ನಿಸಿದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾ ಮಾಡಿದ್ದು ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಲು ಕಾರಣವಾಗಿದೆ.