ನೀವು ಹೋಟೆಲ್, ರೆಸ್ಟೋರೆಂಟ್ ಅಥವಾ ಯಾವುದೇ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿಸಿದಾಗ ನೀಡಲಾಗುವ ಬಿಲ್‌ನಲ್ಲಿ 5% ಅಥವಾ 18% ಜಿಎಸ್‌ಟಿ (GST) ಸೇರಿಸಿರುವುದನ್ನು (Tech Tips) ಗಮನಿಸಿರುತ್ತೀರಿ. ಬಿಲ್‌ನಲ್ಲಿ ಜಿಎಸ್‌ಟಿ ಸಂಖ್ಯೆ (GSTIN) ನಮೂದಾಗಿದ್ದರೆ, ಹೆಚ್ಚಿನವರು ಅದು ಅಧಿಕೃತ ವ್ಯವಹಾರವೆಂದು ನಂಬುತ್ತಾರೆ. ಆದರೆ ವಾಸ್ತವದಲ್ಲಿ, ಕೆಲವು ವ್ಯಾಪಾರಿಗಳು ನಕಲಿ ಜಿಎಸ್‌ಟಿ ಸಂಖ್ಯೆ ಬಳಸಿ ಗ್ರಾಹಕರಿಂದ ಹಣ ವಸೂಲಿ ಮಾಡುವ ಮೂಲಕ ತೆರಿಗೆ ವಂಚನೆ ನಡೆಸುತ್ತಿದ್ದಾರೆ.
ಇಂತಹ GST Fraud ಅನ್ನು ಪತ್ತೆಹಚ್ಚುವುದು ಹೇಗೆ? ಗ್ರಾಹಕರು ಮತ್ತು ಉದ್ಯಮಿಗಳು ತಿಳಿಯಲೇಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಗ್ರಾಹಕರಿಗೂ ಸರ್ಕಾರಕ್ಕೂ ಏಕಕಾಲದ ವಂಚನೆ
ಕೆಲವು ವಂಚಕ ವ್ಯಾಪಾರಿಗಳು ನಕಲಿ ಜಿಎಸ್‌ಟಿ ಬಿಲ್ ಹಾಗೂ ಸುಳ್ಳು GSTIN ಬಳಸಿ ಗ್ರಾಹಕರಿಂದ ತೆರಿಗೆ ಹಣ ವಸೂಲಿ ಮಾಡುತ್ತಾರೆ. ಆದರೆ ಆ ಹಣವನ್ನು ಸರ್ಕಾರಕ್ಕೆ ಪಾವತಿಸುವುದಿಲ್ಲ. ಈ ರೀತಿಯ GST Tax Fraud ನಿಂದ ಸರ್ಕಾರದ ಆದಾಯಕ್ಕೆ ದೊಡ್ಡ ಹೊಡೆತ ಬೀಳುವುದರ ಜೊತೆಗೆ, ಉದ್ಯಮಿಗಳಿಗೆ ಸಿಗಬೇಕಾದ Input Tax Credit (ITC) ಸೌಲಭ್ಯವೂ ಕೈತಪ್ಪುವ ಸಾಧ್ಯತೆ ಇದೆ.
ನಿಮ್ಮ ಜಿಎಸ್‌ಟಿ ಸಂಖ್ಯೆಯ ಹಿಂದಿನ ರಹಸ್ಯ
15 ಅಂಕಿಗಳ ಜಿಎಸ್‌ಟಿ ಸಂಖ್ಯೆ (GSTIN) ಯಾವುದೇ ಯಾದೃಚ್ಛಿಕ ಅಂಕಿಗಳಲ್ಲ. ಇದರೊಳಗೆ ವ್ಯವಹಾರದ ಸಂಪೂರ್ಣ ಮಾಹಿತಿ ಅಡಗಿದೆ.
15 ಅಂಕಿಗಳ GSTIN ರಚನೆ ಹೇಗಿದೆ?
ಮೊದಲ 2 ಅಂಕಿಗಳು – State Code:
ವ್ಯವಹಾರ ನೋಂದಾಯಿತ ರಾಜ್ಯವನ್ನು ಸೂಚಿಸುತ್ತದೆ
(ಉದಾ: ಕರ್ನಾಟಕ – 29, ಮಹಾರಾಷ್ಟ್ರ – 27)
ಮುಂದಿನ 10 ಅಂಕಿಗಳು – PAN Number:
ಉದ್ಯಮಿ ಅಥವಾ ಸಂಸ್ಥೆಯ ಪ್ಯಾನ್ ಸಂಖ್ಯೆ
13ನೇ ಅಂಕಿ – Entity Code:
ಒಂದೇ ಪ್ಯಾನ್ ಅಡಿಯಲ್ಲಿ ಅದೇ ರಾಜ್ಯದಲ್ಲಿ ಮಾಡಿರುವ ನೋಂದಣಿಗಳ ಸಂಖ್ಯೆ
14ನೇ ಅಂಕಿ – ‘Z’:
ಡಿಫಾಲ್ಟ್ ಅಕ್ಷರ
15ನೇ ಅಂಕಿ – Check Code:
ದೋಷ ಪತ್ತೆಗೆ ಬಳಸುವ ಅಂಕಿ/ಅಕ್ಷರ
ನಿಮ್ಮ ಬಿಲ್‌ನಲ್ಲಿರುವ ಜಿಎಸ್‌ಟಿ ಸಂಖ್ಯೆ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಕೇವಲ 2 ನಿಮಿಷಗಳಲ್ಲಿ ಪರಿಶೀಲಿಸಬಹುದು:
- ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ:
- www.gst.gov.in
- Services → Search Taxpayer ಕ್ಲಿಕ್ ಮಾಡಿ
- Search by GSTIN/UIN ಆಯ್ಕೆಮಾಡಿ
- ಬಿಲ್‌ನಲ್ಲಿರುವ 15 ಅಂಕಿಗಳ GSTIN ನಮೂದಿಸಿ
- Captcha ಭರ್ತಿ ಮಾಡಿ ‘Submit’ ಒತ್ತಿರಿ
- GSTIN ಅಸಲಿಯಾಗಿದ್ದರೆ, ಆ ಸಂಸ್ಥೆಯ ಹೆಸರು, ವಿಳಾಸ ಮತ್ತು ನೋಂದಣಿ ಸ್ಥಿತಿ (Active/Inactive) ಪರದೆಯ ಮೇಲೆ ತೋರಿಸುತ್ತದೆ. ಯಾವುದೇ ಮಾಹಿತಿ ಕಾಣಿಸದಿದ್ದರೆ, ಅದು Fake GST Number ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ.
ವ್ಯವಹಾರದ ಸಂಪೂರ್ಣ ವಿವರ ಸಾರ್ವಜನಿಕರಿಗೆ ಲಭ್ಯ
ಅಧಿಕೃತ ಜಿಎಸ್‌ಟಿ ಪೋರ್ಟಲ್‌ನಲ್ಲಿ ಒಂದು GSTIN ಸರ್ಚ್ ಮಾಡಿದರೆ,
- ಆ ಉದ್ಯಮದ ಅಧಿಕೃತ ಹೆಸರು
- ನೋಂದಣಿ ದಿನಾಂಕ
- ವ್ಯವಹಾರ ನಡೆಯುತ್ತಿರುವ ವಿಳಾಸ
- ಉತ್ಪನ್ನ/ಸೇವೆಗಳ ಸ್ವರೂಪ
ಎಲ್ಲ ವಿವರಗಳು ಲಭ್ಯವಾಗುತ್ತವೆ. ಇದು GST Bill Verification ಗೆ ಅತ್ಯಂತ ಉಪಯುಕ್ತ ಸಾಧನವಾಗಿದೆ.
ನಕಲಿ GSTIN ಪತ್ತೆಯಾದರೆ ಏನು ಮಾಡಬೇಕು?
ಬಿಲ್‌ನಲ್ಲಿರುವ ಜಿಎಸ್‌ಟಿ ಸಂಖ್ಯೆಯ ಮಾಹಿತಿಗೂ ಪೋರ್ಟಲ್‌ನಲ್ಲಿರುವ ಮಾಹಿತಿಗೂ ವ್ಯತ್ಯಾಸ ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ:
ಯಾವುದೇ ಕಾರಣಕ್ಕೂ ಅಲ್ಲಿ ಮತ್ತೆ ಖರೀದಿ ಮಾಡಬೇಡಿ
ನಕಲಿ ಜಿಎಸ್‌ಟಿ ಸಂಖ್ಯೆ ಬಳಸಿ ಬಿಲ್ ನೀಡುತ್ತಿರುವವರು, ನಿಮ್ಮಿಂದ ತೆರಿಗೆ ಹೆಸರಿನಲ್ಲಿ ಹಣ ವಸೂಲಿ ಮಾಡಿ ಅದನ್ನು ಸರ್ಕಾರಕ್ಕೆ ಪಾವತಿಸದೆ ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿರುವ ಸಾಧ್ಯತೆ ಹೆಚ್ಚಿರುತ್ತದೆ
ಗ್ರಾಹಕರಿಗೆ ಮಹತ್ವದ ಸೂಚನೆ
ನಿಮ್ಮ ಬಿಲ್‌ನಲ್ಲಿ ಜಿಎಸ್‌ಟಿ ಹಣ ಕಟ್ ಆಗುತ್ತಿದ್ದರೆ, ಅದು ನಿಜವಾಗಿಯೂ ಸರ್ಕಾರದ ಖಜಾನೆಗೆ ಸೇರುತ್ತಿದೆಯೇ ಎಂದು ಪರಿಶೀಲಿಸುವುದು ನಿಮ್ಮ ಹಕ್ಕು ಮತ್ತು ಜವಾಬ್ದಾರಿ. ಒಂದು ಸಣ್ಣ ಪರಿಶೀಲನೆ ದೊಡ್ಡ ವಂಚನೆಯನ್ನು ತಡೆಯಬಹುದು.



